ಬಂಟ್ವಾಳ: ಬಂಟ ಸಮಾಜದ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಕಾರ್ಯ ಅತಿ ಅಗತ್ಯವಾಗಿದ್ದು, ಗುತ್ತು ಮನೆತನದ ಗೌರವವನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ಇದೆ. ಜಾಗತಿಕ ಬಂಟರ ಸಂಘದ ವತಿಯಿಂದ ಮನೆ ಕೊಡುವ ಕಾರ್ಯ, ಮಕ್ಕಳ ಶಿಕ್ಷಣ, ಆರೋಗ್ಯ, ವಿವಾಹಕ್ಕೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ತುಂಬೆ ವಳವೂರಿನ ಬಂಟವಾಳದ ಬಂಟರ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳ ಬಂಟರ ಭವನದ ನಮ್ಮ ದೊಡ್ಡ ಶಕ್ತಿಯಾಗಿ ಕಂಗೊಳಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಉದ್ಯಮಿ ಏರ್ಯ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅರಿಯುವ ಕಾರ್ಯ ಅಗತ್ಯವಾಗಿದ್ದು, ಮಕ್ಕಳಿಗೆ ಅದನ್ನು ಕಲಿಸುವ ಕಾರ್ಯ ಅತಿ ಅಗತ್ಯ ಎಂದರು.
ಹುಬ್ಬಳ್ಳಿ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಬಂಟ್ವಾಳ ಬಂಟರ ಸಂಘ ಶಿಸ್ತಿನ ಮೂಲಕ ಖ್ಯಾತಿ ಗಳಿಸಿದೆ ಎಂದರು. ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಪ್ರಸ್ತಾವನೆಗೈದು, ಇಡೀ ಸಮಾಜ ಸಂಘಟಿತವಾಗಿ ದುಡಿದ ಪರಿಣಾಮ ಬಂಟ್ವಾಳ ಬಂಟರ ಎಲ್ಲೆಡೆ ಖ್ಯಾತಿ ಗಳಿಸಿದ್ದು, ಸುಂದರ ಭವನ ನಿರ್ಮಾಣದಲ್ಲೂ ಎಲ್ಲರೂ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಮುಂದೆಯೂ ಸಮಾಜದ ಏಳಿಗೆಗೆ ಎಲ್ಲರೂ ಜತೆಯಾಗಿ ದುಡಿಯೋಣ ಎಂದರು.
ಸಮಾರಂಭದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಚಂದ್ರಹಾಸ ರೈ ಬಾಲಜಿಬೈಲು, ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ, ಚಲನಚಿತ್ರ ನಿರ್ದೇಶಕ ಚಂದ್ರಹಾಸ ಆಳ್ವ ಚೆಲ್ಲಡ್ಕ, ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಅರಳ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್.ಭಂಡಾರಿ, ಕಲೆ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರಕಾಶ್ ಬಿ.ಶೆಟ್ಟಿ ತುಂಬೆ, ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ, ತಾಲೂಕಿನ ಎಲ್ಲಾ ವಲಯಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ವಿದ್ಯಾ ಅಶ್ವಿನಿ ರೈ, ವಸಂತಿ ಲೋಕನಾಥ ಶೆಟ್ಟಿ, ರಶ್ಮ ಎ.ಆಳ್ವ ಅವರು ಸಮ್ಮಾನ ಪತ್ರ ವಾಚಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಕಿಶೋರ್ ಶೆಟ್ಟಿ ಬಡಗಬೆಳ್ಳೂರು ನಿರ್ವಹಿಸಿದರು.