ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟು ಪರಿಸರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಕೆಎಸ್ಸಾರ್ಟಿಸಿ ಬಸ್ ಹಿಂದಿನಿಂದ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ಈ ಅಪಘಾತವಾದ ಜಾಗದಿಂದ ಸುಮಾರು ನೂರು ಮೀಟರ್ ನಷ್ಟು ಮುಂಭಾಗ ಅಪಘಾತವೊಂದು ಸಂಭವಿಸಿ, ಬೈಕ್ ಸವಾರ ಮೃತಪಟ್ಟಿರುವ ಘಟನೆ ಇನ್ನೂ ಹಸಿರಾಗಿರುವಂತೆಯೇ ಮತ್ತೊಂದು ಅವಘಡ ಸಂಭವಿಸಿದೆ.
ಬಂಟ್ವಾಳದ ಬಿ.ಸಿ.ರೋಡ್ ಭಂಡಾರಿಬೆಟ್ಟು ನಿವಾಸಿ ಹಾಗೂ ಸ್ಥಳೀಯ ಕುಲಾಲ ಭವನದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡೊಂಬಯ್ಯ ಮೂಲ್ಯ (60) ಅವರು ಸಾವನ್ನಪ್ಪಿದವರು.
ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಜಕ್ರಿಬೆಟ್ಟು ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಸಂದರ್ಭದ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಹಿಂಬದಿಯಿಂದ ಸ್ಕೂಟರ್ ಗೆ ಡಿಕ್ಕಿಹೊಡೆದಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಬಿದ್ದಿದ್ದಾರೆ. ಈ ಸಂದರ್ಭ ಅಲ್ಲೇ ಸಾಗುತ್ತಿದ್ದ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ದಿನೇಶ್ ದಂಬೆದಾರ್ ಅವರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ ತೀವ್ರ ಗಾಯದಿಂದಾಗಿ ಡೊಂಬಯ್ಯ ಅವರು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಲಾಗಿದೆ.
ಸಂಕ್ರಮಣ ಹಿನ್ನೆಲೆಯಲ್ಲಿ ದೈವದ ಕೆಲಸಕ್ಕೆಂದು ಹೂವನ್ನು ತರಲೆಂದು ಬಿ.ಸಿ.ರೋಡ್ ಕಡೆಗೆ ಡೊಂಬಯ್ಯ ಅವರು ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…