ಪರವಾನಗಿ ಇಲ್ಲದೆ ಅಕ್ಕಿ ಸಾಗಿಸುತ್ತಿರುವುದನ್ನು ಉಕ್ಕುಡ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಿಟ್ಲ ಪೊಲೀಸ್ ಎಸ್.ಐ. ಮತ್ತು ತಂಡ ಪತ್ತೆಹಚ್ಚಿದ್ದು, ಬಳಿಕ ಮರಕ್ಕಿಣಿಯ ಹನೀಫ್ ಎಂಬವರ ಗೋಡೌನ್ ಗೆ ತೆರಳಿ ಅಲ್ಲಿ ಯಾವುದೇ ದಾಖಲಾತಿಗಳಿಲ್ಲದ 3.3 ಲಕ್ಷ ರೂ ಮೌಲ್ಯದ ಒಟ್ಟು 200 ಅಕ್ಕಿಚೀಲಗಳನ್ನು ಹಾಗೂ 3 ಲಕ್ಷ ರೂ ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 6.3 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ವಿಟ್ಲ ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ ಮತ್ತು ತಂಡ ಸಿಬ್ಬಂದಿ ಜೊತೆ ಕುದ್ದುಪದವು, ಮರಕ್ಕಿಣಿಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಕ್ಕುಡ ಚೆಕ್ ಪೋಸ್ಟ್ ನಲ್ಲಿ ವಾಹನವೊಂದನ್ನು ತಪಾಸಣೆ ಮಾಡಿದಾಗ, ಅದರಲ್ಲಿದ್ದ ವಾಹನ ಚಾಲಕ ಮಹಮ್ಮದ್ ಆಲಿ ವಿಚಾರಣೆ ನಡೆಸಿದ್ದಾರೆ. ವಾಹನ ಪರಿಶೀಲನೆ ಸಂದರ್ಭ 50 ಕೆಜಿಯ 20 ಚೀಲಗಳಿದ್ದು, ಇದನ್ನು ಕೇಪು ಗ್ರಾಮದ ಮರಕ್ಕಿಣಿಯಲ್ಲಿನ ಹನೀಫ್ ಅವರಿಗೆ ಸೇರಿದ ಗೋಡೌ ನ್ ಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದು ಅದರಂತೆ ಮರಕ್ಕಿಣಿಗೆ ತೆರಳಿ,ಗೋಡೌನನ್ನು ಪರಿಶೀಲಿದ್ದು, ಗೋಡೌನ್ನಲ್ಲಿ ಸುಮಾರು ತಲಾ 50 ಕೆ.ಜಿ ತೂಕದ 180 ಚೀಲಗಳಲ್ಲಿ ಒಟ್ಟು 9 ಟನ್ ತೂಕದ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಯಾ ದಾಖಲಾತಿಗಳಿಲ್ಲದೇ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಹಾಗೂ ವಾಹನದಲ್ಲಿದ್ದ ತಲಾ 50 ಕೆ.ಜಿ ಯ 20 ಚೀಲಗಳು, ಒಟ್ಟು ತೂಕ 1 ಟನ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.