ಒಂದೆಡೆ ರೈಲ್ವೆ ನಿಲ್ದಾಣ, ಮತ್ತೊಂದೆಡೆ ಲಯನ್ಸ್ ಸೇವಾ ಮಂದಿರ, ಗುಡ್ಡೆಯಂಥ ಜಾಗದಲ್ಲಿ ಒಣ ಹುಲ್ಲು, ರಸ್ತೆ ಬದಿಯೇ ಮಾಧ್ಯಮಗಳು ನೂರಾರು ಬಾರಿ ಗಮನ ಸೆಳೆಯುತ್ತಿರುವ ಕಸದ ರಾಶಿ… ಗುರುವಾರ ಮಧ್ಯಾಹ್ನ ಇಲ್ಲಿ ಬೆಂಕಿ ಕೊಟ್ಟರೇ, ಬೆಂಕಿ ಸೃಷ್ಟಿಯಾಯಿತೇ ಅಥವಾ ಏನಾಯಿತೋ?…. ದಟ್ಟ ಹೊಗೆಯಂತೂ ಕಾಣಿಸಿಕೊಂಡಿತು.
ಬಿ ಸಿ ರೋಡು ನಾರಾಯಣಗುರು ವೃತ್ತದ ಬಳಿ ಗೂಡಿನಬಳಿ ರಸ್ತೆ ಬದಿ ವಾಹನ ಸವಾರರು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸರವಿಡೀ ಬೆಂಕಿ ಜ್ವಾಲೆ ಹಾಗೂ ಭಾರೀ ಪ್ರಮಾಣದ ಹೊಗೆ ಆವರಿಸಿಕೊಂಡು ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.
ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗೆ ಕರೆ ಮಾಡಿದರು.ಮೆಸ್ಕಾಂ ಇಲಾಖೆ ಸಿಬ್ಬಂದಿಯೂ ಆಗಮಿಸಿ ಬೆಂಕಿ ನಂದಿಸಲು ಹಾಗೂ ಹೆಚ್ಚಿನ ಅಪಾಯವಾಗದಂತೆ ಸಹಕರಿಸಿದರು. ಪೊಲೀಸ್ ಎಸ್.ಐ. ರಾಮಕೃಷ್ಣ ಸ್ಥಳೀಯರೊಂದಿಗೆ ಹಾಗೂ ಮೆಸ್ಕಾಂ ಸಿಬ್ಬಂದಿ ಜೊತೆ ಕಾರ್ಯಾಚರಣೆಗಿಳಿದರು. ಕೆಲಹೊತ್ತಿನ ಬಳಿಕ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಎರಡು ವಾಹನಗಳಲ್ಲಿ ರ್ಯಾಚರಣೆ ಆರಂಭಿಸಿದರು.
ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ರೈಲ್ವೆ ನಿಲ್ದಾಣ ಹಾಗೂ ಲಯನ್ಸ್ ಭವನ ಇದೆ. ಕೆಲ ದೂರದಲ್ಲೇ ಬಿ.ಸಿ.ರೋಡ್ ಪೇಟೆಯೂ ಇದ್ದು, ಕುರುಚಲು ಗಿಡಗಳು ರೈಲ್ವೆ ಟ್ರಾಕ್ ಸಮೀಪವೂ ಇದೆ. ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಪೈಪ್ ಲೈನ್ ಕೂಡಾ ಸಾಗುತ್ತಿದೆ. ಸುಮಾರು 2 ಗಂಟೆ ವೇಳೆಗೆ ದಟ್ಟ ಹೊಗೆ ಈ ಭಾಗದಲ್ಲಿ ಆಗಮಿಸಿದ್ದು, ಆ ಹೊತ್ತಿಗಾಗಲೇ ಸ್ಥಳೀಯರು ಜಮಾಯಿಸಿ, ಅಗ್ನಿ ನಂದಿಸಲು ತೊಡಗಿದರು. ಕೆಲ ಹೊತ್ತು ಬಿ.ಸಿ.ರೋಡ್ ಗೂಡಿನಬಳಿ ರಸ್ತೆಯನ್ನು ಬಂದ್ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಯೋಜನಾ ನಿರ್ದೇಶಕರೂ ಆಗಿರುವ ಅಬಿದ್ ಗದ್ಯಾಲ್ ಮತ್ತು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.