ಬಂಟ್ವಾಳ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಇವರಿಗೆ ಶುಲ್ಕ ರಹಿತ ಭದ್ರತಾ ಅಂಗರಕ್ಷಕ (ಗನ್ ಮೆನ್) ಸೌಲಭ್ಯ ಮತ್ತೆ ನೀಡಬೇಕು ಎಂದು ಬಂಟ್ವಾಳ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಗ್ರಹಿಸಿದೆ.
ಬಂಟ್ವಾಳ ಆಡಳಿತ ಸೌಧದಲ್ಲಿ ಬಂಟ್ವಾಳ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನವೀನ್ ಕೋಟ್ಯಾನ್ ನೇತೃತ್ವದ ನಿಯೋಗ ಬುಧವಾರ ತೆರಳಿ ಉಪ ತಹಶೀಲ್ದಾರ್ ನರೇಂದ್ರನಾಥ್ ಇವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕೆಲವೊಂದು ಮತೀಯ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸತ್ಯಜಿತ್ ಸುರತ್ಕಲ್ ಇವರಿಗೆ ಕಳೆದ 16ವರ್ಷಗಳಿಂದ ಸರ್ಕಾರ ಶುಲ್ಕ ರಹಿತ ಅಂಗರಕ್ಷಕ (ಗನ್ ಮೆನ್) ಸೌಲಭ್ಯ ನೀಡಿತ್ತು. ಇದೀಗ ಚುನಾವಣೆ ನೆಪದಲ್ಲಿ ಏಕಾಯೇಕಿ ಈ ಸೌಲಭ್ಯ ವಾಪಾಸು ಪಡೆದು ಶುಲ್ಕ ಪಾವತಿಸಲು ಸೂಚಿಸಿರುವುದು ಖಂಡನೀಯ. ಈ ಆದೇಶ ಕೂಡಲೇ ರದ್ದುಗೊಳಿಸಿ, ಶುಲ್ಕ ರಹಿತ ಸೌಲಭ್ಯ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ಪ್ರೇಮನಾಥ್ ಕರ್ಕೇರ, ನಾರಾಯಣ ಪೂಜಾರಿ, ಸುಂದರ ಪೂಜಾರಿ ಬೋಳಂಗಡಿ, ಜಯ ಕೋಟ್ಯಾನ್, ಸತೀಶ್ ಬೈಲ, ಲೋಕೇಶ ಅಲೆತ್ತೂರು, ಅಶೋಕ್ ಪೂಜಾರಿ, ಪ್ರಭಾಕರ ಮಧ್ವ ಮತ್ತಿತರರು ಇದ್ದರು.