ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತುರ್ತು ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳು, ಪಿಡಿಒಗಳು ಮತ್ತು ಗ್ರಾಪಂ ಅಧ್ಯಕ್ಷರ ತುರ್ತು ಸಭೆಯಲ್ಲಿ ಅವರು ಮಾತನಾಡಿ, ಕುಡಿಯುವ ನೀರಿಗೆ ಎಲ್ಲಿ ಸಂಪನ್ಮೂಲಗಳಿವೆಯೋ ಅವುಗಳನ್ನು ಬಳಸಿಕೊಂಡು ಜನರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಸೂಚಿಸಿದರು.
ಜಿಪಂ ಸಿಇಒ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲ್ತಿಯಲ್ಲಿದೆ. ಆದರೆ ಸಂಗಬೆಟ್ಟು ಬಹುಗ್ರಾಮ ಯೋಜನೆಯ ಮಡಿಲಲ್ಲೇ ನೀರಿನ ಸಮಸ್ಯೆ ತಲೆದೋರಿರುವುದು ಯೋಜನೆಯ ವೈಫಲ್ಯವನ್ನು ಸೂಚಿಸುತ್ತದೆ. ಅಂತರ್ಜಲ ಬತ್ತಿಹೋದ ಸಂದರ್ಭ ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕು ಎಂದರು.
ತಾಲೂಕಿನ ಹಲವು ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಈ ಸಂದರ್ಭ ನೀರಿನ ಸಮಸ್ಯೆಗಳ ಕುರಿತು ವಿವರ ನೀಡಿದರು. ಅರಳ ಗ್ರಾಪಂ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ ಮಾತನಾಡಿ, ಸಂಗಬೆಟ್ಟು ಬಹುಗ್ರಾಮ ಯೋಜನೆಗೆ ಒಳಪಡುವ ಗ್ರಾಮಗಳಿಗೆ ನೀರಿಲ್ಲ ಎಂದರೆ, ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ, ಬಹುಗ್ರಾಮ ಯೋಜನೆಯ ಪೈಪುಗಳನ್ನು ಹೆದ್ದಾರಿ ಕಾಮಗಾರಿ ನಡೆಸುವವರು ಒಡೆದು ಹಾಕುವ ಸಂದರ್ಭ ಸಮಸ್ಯೆ ಉಂಟಾಗಿದೆ ಎಂದರು. ಗೋಳ್ತಮಜಲು ಪಿಡಿಒ ವಿಜಯಶಂಕರ ಆಳ್ವ ಅವರೂ ಈ ಕುರಿತು ಮಾತನಾಡಿ, ಹೈವೇ ಕಾಮಗಾರಿ ನಡೆಯುವ ಪ್ರದೇಶವಾದ ಗೋಳ್ತಮಜಲಲ್ಲಿ ನೀರಿನ ಪೈಪುಗಳು ಹೆದ್ದಾರಿ ಕಾಮಗಾರಿ ಸಂದರ್ಭ ಹಾನಿಗೀಡಾಗುತ್ತಿವೆ ಎಂದರು. ಇದೇ ಸಮಸ್ಯೆಯನ್ನು ನರಿಕೊಂಬು ಗ್ರಾಪಂ ಅಧ್ಯಕ್ಷೆ ವಿನಿತಾ ಪುರುಷೋತ್ತಮ ಹೇಳಿದರು. ಚೆನ್ನೈತೋಡಿಯ ಸಮಸ್ಯೆಗಳ ಕುರಿತು ಭಾರತಿ ರಾಜೇಂದ್ರ ಪೂಜಾರಿ ಪ್ರಸ್ತಾಪಿಸಿದರು.
ಈ ಸಂದರ್ಭ ಮಾತನಾಡಿದ ಜಿಪಂ ಸಿಇಒ ಕುಮಾರ್, ಕಾಮಗಾರಿ ಸಂದರ್ಭ ಪೈಪ್ ಹಾಳಾದರೆ ಅದು ಒಂದರಿಂದ ಎರಡು ದಿನದೊಳಗೆ ರಿಪೇರಿ ಆಗದಿದ್ದರೆ ಪಿಡಿಒ ಸಂಬಂಧಪಟ್ಟವರ ಗಮನಕ್ಕೆ ತರಬೇಕು ಎಂದರು. ಬೋರ್ವೆಲ್ ಬತ್ತಿ ಹೋಗಿರುವ ಒಂದು ಕಿ.ಮೀ. ವ್ಯಾಪ್ತಿಯ ಖಾಸಗಿ ಬಾವಿ, ಬೋರ್ವೆಲ್ ಗಳ ಪಟ್ಟಿ ಮಾಡಿಕೊಳ್ಳಬೇಕು ಎಂದು ಈ ಸಂದರ್ಭ ಕುಮಾರ್ ಸೂಚನೆ ನೀಡಿದರು. ಅನುಮತಿ ಪಡೆಯದೆ ಸಭೆಗೆ ಬಾರದ ಪಿಡಿಒಗಳು ನನ್ನ ಕಚೇರಿಗೆ ಬಂದು ಭೇಟಿಯಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಕುಮಾರ್ ಹೇಳಿದರು.
ಈ ಸಂದರ್ಭ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ನರೇಂದ್ರಬಾಬು, ತಾಲೂಕು ಪಂಚಾಯಿತಿ ಇಒ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.