ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ದೃಢಕಲಶ ಕಾರ್ಯಕ್ರಮ ಬುಧವಾರ ನಡೆಯಿತು. ಬೆಳಗ್ಗೆ ಗಣಪತಿಹೋಮ, ಕಲಶಾಭಿಷೇಕ, ಮಾಗಣೆಯ ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಹಾಅನ್ನಸಂತರ್ಪಣೆ ನಡೆದು, ಬಳಿಕ ಸ್ಥಳೀಯ ಕಲಾಪ್ರತಿಭೆಗಳ ನೃತ್ಯವೈವಿಧ್ಯ, ಧಾರ್ಮಿಕ ಸಭೆ, ಬ್ರಹ್ಮಕಲಶೋತ್ಸವದಲ್ಲಿ ದುಡಿದವರಿಗೆ ಗೌರವಾರ್ಪಣೆ, ಕಲಾ ಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆದವು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ನಂದಾವರ ಕ್ಷೇತ್ರ ಸಂಪರ್ಕಿಸಲು ರಿಂಗ್ ರೋಡ್ ಮಾಡುವ ಪ್ರಸ್ತಾವಕ್ಕೆ ಚಾಲನೆ ನೀಡಲಾಗಿದ್ದು, ಹೆಚ್ಚುವರಿ ಹತ್ತು ಕೋಟಿ ರೂಗಳನ್ನು ನೀಡುವುದಾಗಿ ತಿಳಿಸಿದರು. ದೇವಸ್ಥಾನದ ಅಭಿವೃದ್ಧಿ ಸಂದರ್ಭ ಸ್ಥಳೀಯರು ಒಟ್ಟಾಗಿದ್ದರೆ, ಕೆಲಸಗಳು ವೇಗವಾಗಿ ಸಾಗಲು ನೆರವಾಗುತ್ತವೆ. ಇನ್ನೊಂದು ಐವತ್ತು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡಬೇಕು. ದೇವಸ್ಥಾನದಂತೆ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಬೇಕಾಗಿದೆ ಎಂದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ ಎಷ್ಟೇ ಕಷ್ಟವಾದರೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರ ಅವಿಭಜಿತ ದ.ಕ ಜಿಲ್ಲೆಯಲ್ಲಿ ನಡೆಯುತ್ತಿದೆ. ಭಕ್ತರು ಸರಿಯಾಗಿ ಸ್ಪಂದಿಸಿದಾಗ ಅಭಿವೃದ್ಧಿ ಸಾಧ್ಯ, ಭಕ್ತಿ, ಶ್ರದ್ಧೆ ಜಾಗೃತವಾಗಲಿ ಎಂದರು.
ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ ವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶಾಮ ಭಟ್ ಮಾತನಾಡಿ, ನಂದಾವರ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದ್ದು, ಊರವರ ಸಹಕಾರದಿಂದ ಕ್ಷೇತ್ರಸಾನಿಧ್ಯ ಅಭಿವೃದ್ಧಿಯಾಗುತ್ತಿದೆ ಎಂದರು.
ಉದ್ಯಮಿಗಳಾದ ಕೆ.ಡಿ.ಶೆಟ್ಟಿ, ಅಶೋಕ್ ಪಕ್ಕಳ,ರವೀಂದ್ರನಾಥ ಭಂಡಾರಿ ಪುಣ್ಕೆಮಜಲು, ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಅರವಿಂದ ಭಟ್ ಪದ್ಯಾಣ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ, ಉಪಾಧ್ಯಕ್ಷ ರಾಮಪ್ರಸಾದ ಆಳ್ವ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೇದಮೂರ್ತಿ ಮಹೇಶ ಭಟ್(ಪ್ರಧಾನ ಅರ್ಚಕರು), ಕವಿತಾ ವಸಂತ್ ನಾರ್ಣಗುಡ್ಡೆ, ಜಯಶ್ರೀ ಅಶೋಕ್ ಗಟ್ಟಿ ಕಟ್ಲೆಮಾರ್, ದೇವಪ್ಪ ನಾಯ್ಕ ದಾಸರಗುಡ್ಡೆ, ಎನ್.ಮೋಹನದಾಸ ಹೆಗ್ಡೆ ನಗ್ರಿ, ಯಶವಂತ ದೇರಾಜೆಗುತ್ತು, ಅರುಣ್ ಕುಮಾರ್ ಕುಕ್ಕುದಕಟ್ಟೆ, ಗಣೇಶ್ ಕಾರಾಜೆ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಅರುಣ್ ಕುಮಾರ್ ಕುಕ್ಕುದಕಟ್ಟೆ ಸ್ವಾಗತಿಸಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ಕೇಶವ ಮಾಸ್ಟರ್ ವಂದಿಸಿದರು.