ಬಂಟ್ವಾಳ: ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಏಕೆ ಎಂದು ಲೋಕಾಯುಕ್ತ ಎಸ್ಪಿ ಸೈಮನ್ ಗರಂ ಆದ ಘಟನೆ ಮಂಗಳವಾರ ಬಂಟ್ವಾಳ ತಾಲೂಕಿನಲ್ಲಿ ಕರೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು.
ಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು ಹದಿನಾಲ್ಕು ದೂರುಗಳು ಸ್ವೀಕೃತವಾದವು. ಈ ಸಂದರ್ಭ ಕರೋಪಾಡಿ ಗ್ರಾಮದ ವಿಕ್ಟರ್ ವೇಗಸ್ ಎಂಬವರು ದೂರು ನೀಡಿ, ತನ್ನ ಕಡತಗಳ ಕುರಿತು ತಾಲೂಕು ಕಚೇರಿಯಲ್ಲಿ ಕೇಳಿದರೆ, ತನಗೆ ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ, ಪ್ರತಿ ಬಾರಿಯೂ ಕಡತ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭ ಗರಂ ಆದ ಲೋಕಾಯುಕ್ತ ಎಸ್ಪಿ ಸೈಮನ್, ಸಂಬಂಧಪಟ್ಟ ವಿಷಯ ನಿರ್ವಾಹಕ ಅವರನ್ನು ಕರೆಸಿ, ಇಂಥ ಸನ್ನಿವೇಶ ನಿರ್ಮಾಣ ಏಕಾಗುತ್ತಿದೆ, ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಈ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ತಹಸೀಲ್ದಾರ್ ಎಸ್.ಪಿ.ಕೂಡಲಗಿ, ಹತ್ತು ದಿನದೊಳಗೆ ಸಮಸ್ಯೆಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೂರುದಾರ ವಿಕ್ಟರ್ ವೇಗಸ್ ಪ್ರತಿಕ್ರಿಯಿಸಿ, ನನಗೆ ಎರಡು ತಿಂಗಳ ಅವಧಿಯಾದರೂ ಸರಿ ಕಡತ ನೀಡಿ ಎಂದರು. ಸಮಾಧಾನಪಡಿಸಿದ ಎಸ್ಪಿ ಸೈಮನ್, ಕಡತಗಳನ್ನು ನಿಗದಿತ ಸಮಯದೊಳಗೆ ನೀಡದೇ ಇದ್ದರೆ, ಈ ಕುರಿತು ದೂರು ನೀಡಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದೇ ರೀತಿಯ ಕೆಲ ಪ್ರಕರಣಗಳು ಲೋಕಾಯುಕ್ತದ ಮುಂದೆ ಬಂದವು. ತನಗೆ ಹಕ್ಕುಪತ್ರವೇ ಸಿಕ್ಕಿಲ್ಲ ಎಂದು ಸಾರ್ವಜನಿಕರೊಬ್ಬರು ಹೇಳಿದರೆ, ನನ್ನ ಕಡತಗಳ ಸ್ಥಿತಿ ಸರ್ವೆ ಕಚೇರಿಯಿಂದ ಕಂದಾಯಕ್ಕೆ ಅಲೆದಾಡುವಂತಾಗಿದೆ ಎಂದು ಮಹಿಳೆಯೊಬ್ಬರು ದೂರಿದರು.ಶಂಭೂರು ಎಎಂಆರ್ ಅಣೆಕಟ್ಟೆ ನಿರ್ಮಾಣ ಸಂದರ್ಭ ತನಗೆ ಸೂಕ್ತ ಪರಿಹಾರ ಇನ್ನೂ ದೊರಕಿಲ್ಲ ಎಂದು ಸ್ಥಳೀಯ ರಾಮಣ್ಣ ಶೆಟ್ಟಿ ಎಂಬವರು ದೂರು ನೀಡಿದರು.
ಪಾಣೆಮಂಗಳೂರು ಸಮೀಪ ಪುರಸಭೆ ಮತ್ತು ನರಿಕೊಂಬು ಗ್ರಾಪಂ ಮಧ್ಯೆ ಹೈವೇ ಕಾಮಗಾರಿ ಆಗುವ ಜಾಗದಲ್ಲಿ ನೇತ್ರಾವತಿ ನದಿಗೆ ನೀರು ಹರಿಯುವ ತೋಡು ಒಂದಿದ್ದು, ಅದೀಗ ಅಗಲಕಿರಿದಾಗತೊಡಗಿದೆ. ಸ್ಥಳೀಯರು ಅದರ ಒತ್ತುವರಿ ಮಾಡಿಕೊಂಡಿದ್ದ ಕಾರಣ, ಯಾವುದೇ ನೀರು ಸರಿಯಾಗಿ ಹರಿಯದೆ, ಸ್ಥಳೀಯ ರೈತರಿಗೆ, ಕೃಷಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಮೇಲ್ಕಾರ್ ಬಳಿ ಒತ್ತುವರಿ ಆಗಿದ್ದನ್ನು ತೆರವು ಮಾಡಬೇಕು, ಈಗ ಹೂಳು ತುಂಬಿದ್ದು, ಅಗಲ ಕಿರಿದಾಗಿದ್ದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ತುಂಬೆ ಅಣೆಕಟ್ಟು ನಿರ್ಮಾಣ ಸಂದರ್ಭ ಸ್ಥಳೀಯ ರೈತಸಂತ್ರಸ್ತರಿಗೆ ಇನ್ನೂ ಸಮರ್ಪಕವಾದ ಪರಿಹಾರ ದೊರಕಿಲ್ಲ. ಜನಪ್ರತಿನಿಧಿಗಳ ಸಹಿತ ಹಲವು ಅಧಿಕಾರಿಗಳ ಬಾರಿ ಸಾಕಷ್ಟು ಬೇಡಿಕೆಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಕುರಿತು ಗಮನಹರಿಸಿ, ಸೂಕ್ತ ನಿರ್ದೇಶನ ನೀಡುವಂತೆ ಹೋರಾಟಗಾರರ ಮುಖಂಡರಾದ ಸುಬ್ರಹ್ಮಣ್ಯ ಭಟ್, ಸುದೇಶ್ ಮಯ್ಯ ಮತ್ತಿತರರು ದೂರು ನೀಡಿದರು.
ತಾಲೂಕಿನವರಾದ ಹೆನ್ರಿ ಡಿಸೋಜ, ವಿಶ್ವನಾಥ ಚಂಡ್ತಿಮಾರ್ ಸಹಿತ ಹಲವರು ಮನವಿ, ಅಹವಾಲು, ದೂರುಗಳನ್ನು ನೀಡಿದರು. ತಹಸೀಲ್ದಾರ್ ಎಸ್.ಪಿ.ಕೂಡಲಗಿ, ಲೋಕಾಯುಕ್ತ ನಿರೀಕ್ಷಕರಾದ ವಿನಾಯಕ ಬಿಲ್ಲವ, ಸಿಬಂದಿಗಳಾದ ಮಹೇಶ್ ಕುಮಾರ್, ವಿನಾಯಕ್, ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ವಿವಿಧ ಇಲಾಖೆಗಳ ಪ್ರಮುಖರು ಹಾಜರಿದ್ದರು.