ಜಕ್ರಿಬೆಟ್ಟುವಿನ ನಿರ್ಮಾಣಗೊಳ್ಳುತ್ತಿರುವ ಸೇತುವೆ ಸಹಿತ ಡ್ಯಾಂನ ಕಾಮಗಾರಿ ಅತ್ಯಂತ ತ್ವರಿತಗತಿಯಲ್ಲಿ ಸಾಗುತ್ತಿದ್ದು ಮುಂದಿನ ಮೇ ತಿಂಗಳಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ, ಇದು ಪೂರ್ಣಗೊಂಡರೆ, ಮಂಗಳೂರಿನ ನೀರಿನ ಸಮಸ್ಯೆ ದೂರವಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಹೇಳಿದರು.
ಅವರು ಬಂಟ್ವಾಳದ ಜಕ್ರಿಬೆಟ್ಟುವಿನ 135 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಸಹಿತ ಅಣೆಕಟ್ಟು( ಬ್ರಿಡ್ಜ್ ಕಂ ಬ್ಯಾರೇಜ್)ವಿನ ಕಾಮಗಾರಿ ವೀಕ್ಷಿಸಿ ಪ್ರಗತಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ನವೆಂಬರ್ 18 ರಂದು ಸಣ್ಣನೀರಾವರಿ ಇಲಾಖೆಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಮುಂದಿನ ವರ್ಷಕ್ಕೆ ಈ ಡ್ಯಾಂನ ಸಂಪೂರ್ಣ ಪ್ರಯೋಜನ ಈ ಭಾಗದ ಜನರಿಗೆ ಸಿಗಲಿದೆ, ಈ ಬಾರಿ ಬಿಸಿಲಿನ ತಾಪಕ್ಕೆ ನೀರಿನ ಅಭಾವ ಉಂಟಾಗುವ ಆತಂಕ ಇದೆ. ಈ ಡ್ಯಾಂ ನಿರ್ಮಾಣಗೊಂಡ ಬಳಿಕ ನೀರಿಗಾಗಿ ಪರಿತಪಿಸುವ ಸಂಕಷ್ಟ ದೂರವಾಗಲಿದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸನ್ನ ಶಾಸಕರಿಗೆ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯರಾದ ಹರಿಪ್ರಸಾದ್ ಮೀನಾಕ್ಷಿಗೌಡ, ಪ್ರಮುಖರಾದ ರಮನಾಥ ರಾಯಿ, ಮಚ್ಚೇಂದ್ರ ಸಾಲ್ಯಾನ್, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು.