ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಭರವಸೆಗಳನ್ನು ಸರಕಾರ ಬಂದರೆ ಈಡೇರಿಸುವುದು ಗ್ಯಾರಂಟಿ. ಜನರ ಸಂಕಷ್ಟಕ್ಕೆ ಪಕ್ಷ ಸ್ಪಂದಿಸಲಿದ್ದು, ಬಿಜೆಪಿ ಸರಕಾರದ ನೀತಿಯಿಂದ ಸೊರಗಿದ ಜನತೆಯ ಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಭರವಸೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಹೇಳಿದ್ದಾರೆ.
ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿದ್ದು, ಕುಕ್ಕಾಜೆ ಜಂಕ್ಷನ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ, ರಾಜ್ಯ ಸರಕಾರಗಳ ಸಾಧನೆಗಳನ್ನು ಹೇಳಿ ಮತ ಪಡೆದುಕೊಳ್ಳಲು ಯತ್ನಿಸಲಿ ಎಂದು ಬಿಜೆಪಿಗೆ ಸವಾಲೆಸೆದ ಅವರು, ಕಾಂಗ್ರೆಸ್ ಪಕ್ಷದ ಸಾಧನೆ ಮುಂದೆ ಬಿಜೆಪಿ ಲೆಕ್ಕಕ್ಕಿಲ್ಲ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾನು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನು ಸಂಪಾದಿಸಿದ್ದು, ಪೊಳ್ಳು ಭರವಸೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ರೈತರಿಗೆ ಉಚಿತ ವಿದ್ಯುತ್, ಸಾಲ ಮನ್ನಾದಂಥ ಯೋಜನೆ ನೀಡಿದ್ದು, ಇನ್ನೂ ಅವಾಸ್ತವವಾದ ಯೋಜನೆ ಘೋಷಿಸಿಲ್ಲ, ಈಡೇರಿಸುವಂಥ ಘೋಷಣೆಯನ್ನೇ ಹೇಳಿದ್ದೇವೆ ಎಂದರು. ರಾಜಕೀಯದಲ್ಲಿ ಕೋಟ್ಯಂತರ ರೂಪಾಯಿ ಹಣ ನಾನು ಮಾಡಲಿಲ್ಲ, ಕಮೀಷನ್ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ, ಇದು ನನ್ನ ಕೊನೆಯ ಚುನಾವಣೆ ಎಂದರು.
ಯಾತ್ರೆ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಜಯಂತಿ ಪೂಜಾರಿ, ಐಡಾ ಸುರೇಶ್, ಸಿದ್ಧೀಕ್ ಗುಡ್ಡೆಯಂಗಡಿ, ಲೋಲಾಕ್ಷ ಶೆಟ್ಟಿ, ವಾಸು ಪೂಜಾರಿ, ಸದಾಶಿವ ಬಂಗೇರ, ಅಬ್ದುಲ್ ರಝಾಕ್ ಕುಕ್ಕಾಜೆ, ಅರ್ಶದ್ ಸರವು, ಇಬ್ರಾಹಿಂ ನವಾಜ್, ಬಾಲಕೃಷ್ಣ ಆಳ್ವ ಕೊಡಾಜೆ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಪದ್ಮನಾಭ ರೈ, ಡೆಂಝಿಲ್ ನೊರೊನ್ಹ, ತಿಲಕ್ ಮಂಚಿ, ವೆಂಕಪ್ಪ ಪೂಜಾರಿ, ಪ್ರವೀಣ್ ರೋಡ್ರಿಗಸ್, ಆಲ್ಪರ್ಟ್ ಮೆನೇಜಸ್, ನಜೀಬ್, ಸಿದ್ಧೀಕ್ ಸರವು ಮತ್ತಿತರರು ಉಪಸ್ಥಿತರಿದ್ದರು.