ಇಂದು ಗಮಕ ವಾಚನಕ್ಕೆ ಸಂಬಂಧಿಸಿದ ಕಲಾಪೋಷಣೆಗೆ ಜನರ ಪ್ರೋತ್ಸಾಹವಷ್ಟೇ ಅಲ್ಲ, ಸರಕಾರದ ನೆರವೂ ಬೇಕಾಗುತ್ತದೆ. ಕೇವಲ ಬಾಯ್ಮಾತಿನ ಹೇಳಿಕೆಯಷ್ಟೇ ಅಲ್ಲ, ಆರ್ಥಿಕ ಬೆಂಬಲ ದೊರಕಿದರೆ, ಗಮಕ ಕಲೆ ಸದೃಢವಾಗಿ ಬೆಳೆಯಬಲ್ಲದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಡಾ. ವಾರಿಜಾ ನಿರ್ಬೈಲ್ ಸರ್ವಾಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಬಂಟ್ವಾಳ ತಾಲೂಕು ಮಟ್ಟದ ಎರಡನೇ ಗಮಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಗಮಕ ಕಲಾ ಪರಿಷತ್ ವತಿಯಿಂದ ಬಂಟ್ವಾಳ ತಾಲೂಕು ದ್ವಿತೀಯ ಗಮಕ ಸಮ್ಮೇಳನ ನಡೆಯುತ್ತಿದ್ದು, ಇದು ಕನ್ನಡ ಸಾಹಿತ್ಯ ಪರಿಷತ್ತಿನಂತೆಯೇ ಗಟ್ಟಿಯಾಗಿ ಬೆಳೆಯಬೇಕು. ಗಮಕ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಪೋಷಕರು ಮಕ್ಕಳನ್ನು ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಗಮಕದ ಪರಿಚಯ ಆಗಬೇಕು. ಹಾಗೆಯೇ ಪರಿಷತ್ತಿನ ಅಭಿವೃದ್ಧಿಗೆ ಸಲಹೆ ಜೊತೆ ಸಹಕಾರವೂ ಬೇಕು. ಕಲೆ ಬೆಳೆಸುವ ಕೆಲಸ ಮಾಡಬೇಕು ಎಂದು ಪುನರೂರು ಹೇಳಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ.ವಾರಿಜಾ ನಿರ್ಬೈಲ್ ಮಾತನಾಡಿ, ಕವಿಯು ಶ್ರಮ ಪಟ್ಟು ರಚಿಸಿದ ಕಾವ್ಯಾನುಭವವನ್ನು ಶ್ರೋತೃಗಳಿಗೆ ತಲುಪಿಸಲು ಗಮಕಿಗಳ ಪಾತ್ರ ದೊಡ್ಡದು ಎಂದರು.
ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಾನಂದ ಪಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಪ್ರಧಾನ ಸಂಚಾಲಕ ಕೃಷ್ಣ ಶರ್ಮ ಅನಾರು, ಸಂಚಾಲಕ ರಾಜಮಣಿ ರಾಮಕುಂಜ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಿನ್ಸಿಪಾಲ್ ಡಾ.ಮಹಾಲಿಂಗ ಭಟ್ ವಂದಿಸಿದರು. ಬಳಿಕ ಹಿರಿ, ಕಿರಿಯರಿಂದ ಗಮಕ ವಾಚನ, ವಿಚಾರಗೋಷ್ಠಿ, ತಾಳಮದ್ದಳೆ ಸಂವಾದಗಳು ನಡೆದವು.