ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಿಳಾ ವಿಭಾಗದಿಂದ ಬಂಟ್ವಾಳದ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭಮಹಾಲಕ್ಷ್ಮೀ ಅರ್ಕಮೆ, ಶ್ರೀದೇವಿ ನಾರಾಯಣ ಭಟ್ ಕೈಯೂರು, ರೇಣುಕಾ ಸುಧೀರ್ ಬೆಳ್ತಂಗಡಿ ಮತ್ತು ಮಲ್ಲಿಕಾ ರಾಧಾಕೃಷ್ಣ ತಂತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರಿನ ಸ್ವಸ್ತಿಕ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮಾಲಿನಿ ಹೆಬ್ಬಾರ್, ಶಿಕ್ಷಣ,ಸ್ವಾವಲಂಬನೆ,ಸ್ವಾಭಿಮಾನ ಈ ಮೂರನ್ನು ಮಹಿಳೆಯರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯ ವೈದ್ಯೆ ಡಾ. ಶಶಿಕಲಾ ಸೋಮಯಾಜಿ ಮಾತನಾಡಿ, ಮಹಿಳೆ ಇಲ್ಲದ ಜಗತ್ತು ಊಹಿಸಲಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಮಹಾಸಭಾದ ರಾಜ್ಯ ಉಪಾಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ವಹಿಸಿ ಮಾತನಾಡಿ, ಜಗತ್ತಿನಲ್ಲಿ ಸ್ರೀಯನ್ನು ಮಾತೃಸ್ವರೂಪದಲ್ಲಿ ಗೌರವಿಸುವ ದೇಶವಿದ್ದರೆ ಅದು ಭಾರತ ಮಾತ್ರ. ವೈದಿಕ ಪರಂಪರೆ ಅಥವಾ ಋಷಿ ಪರಂಪರೆಯಲ್ಲೇ ಇರಬಹುದು ಸ್ತ್ರೀ ಯಾವತ್ತೂ ಪರಿಪೂರ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ, ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮದ ಅಧ್ಯಕ್ಷ ರಾಜಾರಾಮ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ನ್ಯಾಯವಾದಿ ಉಮಾ ಎನ್. ಸೋಮಯಾಜಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪವಿತ್ರಾ ಮಯ್ಯ ಪ್ರಾರ್ಥಿಸಿದರು. ಪೂರ್ಣಿಮಾ ಪ್ರಭಾಕರ್ ಪೇಜಾವರ ನಿರೂಪಣೆಗೈದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಕಿ ವತ್ಸಲಾ ರಾಜ್ಞಿ ವಂದಿಸಿದರು.