‘
ಬಂಟ್ವಾಳ: ಕೆಲ ದಿನಗಳ ಹಿಂದೆ ನಿಧನ ಹೊಂದಿದ ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗದ ಕೋಶಾಧಿಕಾರಿ ಎಸ್.ಗಂಗಾಧರ ಭಟ್ ಕೊಳಕೆ ಅವರಿಗೆ ಬಳಗದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಗುರುವಾರ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ್ ಜೈನ್ ನುಡಿನಮನ ಸಲ್ಲಿಸಿ, ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿ ಬಳಗದ ಪ್ರೇರಕರಾಗಿದ್ದ ಭಟ್ ಅವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತನ್ನ ದೇಹವೂ ಮುಂದೆ ಪ್ರಯೋಜನವಾಗಬೇಕು ಎಂದು ಅದನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿದ್ದು, ಈ ಮೂಲಕ ಅವರು ನಮ್ಮ ನಡುವೆ ನಿರಂತರವಾಗಿ ಉಳಿಯಲಿದ್ದಾರೆ ಎಂದರು.
ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ, ಕನ್ನಡ ಭವನ ನಿರ್ಮಾಣದ ಸಂಚಾಲಕರಾಗಿ ಭವನಕ್ಕೆ ಭಟ್ ಕೊಡುಗೆ ಅಪಾರ ಎಂದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಮಾತನಾಡಿ, ಗಂಗಾಧರ ಭಟ್ ಕಿರಿಯರಿಗೆ ಮಾರ್ಗದರ್ಶಿಯಾಗಿದ್ದರು ಎಂದರು.
ಸುಭಾಶ್ಚಂದ್ರ ಜೈನ್, ಎಚ್.ಕೆ.ನಯನಾಡು, ಮಧುಸೂದನ್ ಶೆಣೈ, ಪರಮೇಶ್ವರ ಮೂಲ್ಯ, ಸೀತಾರಾಮ ಶೆಟ್ಟಿ, ಸುಕುಮಾರ್ ಬಂಟ್ವಾಳ, ಅನಾರು ಕೃಷ್ಣ ಶರ್ಮ, ಸತೀಶ್ ಕುಮಾರ್, ಹರೀಶ್, ಶರಧಿಕುಮಾರ್ ಉಪಸ್ಥಿತರಿದ್ದರು. ಬಳಗದ ಉಪಾಧ್ಯಕ್ಷ ಶಿವಶಂಕರ್ ಎಸ್. ಸ್ವಾಗತಿಸಿ, ವಂದಿಸಿದರು.