ಬಂಟ್ವಾಳ

ಗಂಗಾಧರ ಭಟ್ ಅವರಿಗೆ ಕಸಾಪ ವತಿಯಿಂದ ನುಡಿನಮನ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿಯ ಸಂಚಾಲಕ ಹಾಗೂ ಸಾಹಿತ್ಯಪ್ರೇಮಿ ಬಂಟ್ವಾಳ ತಾಲೂಕಿನ ಕೊಳಕೆ ನಿವಾಸಿ ಕೆ.ಗಂಗಾಧರ ಭಟ್ ಅವರಿಗೆ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ನೇತೃತ್ವದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಈ ಸಂದರ್ಭ ಮಾತನಾಡಿ, ಪರಿಷತ್ತಿಗೊಂದು ಭವನ ನಿರ್ಮಾಣ ಮಾಡುವ ಸಂದರ್ಭ ಗಂಗಾಧರ ಭಟ್ ಪ್ರೇರಕ ಶಕ್ತಿಯಾಗಿದ್ದು, ಈ ಕಾರಣದಿಂದಾಗಿಯೇ ಜಿಲ್ಲೆಯಲ್ಲೇ ಸುಂದರವಾದ ಕನ್ನಡ ಭವನ ತಲೆಎತ್ತಿ ನಿಂತಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡಲಾಗಿದೆ. ಆದರೂ ಸಮರ್ಪಕವಾದ ಜಾಗ ದೊರಕಿಲ್ಲ. ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸತತ ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಇದಕ್ಕೆ ಗಂಗಾಧರ ಭಟ್ ಅವರಂಥ ಶ್ರಮಜೀವಿಗಳು, ಸಾಹಿತ್ಯಪ್ರೇಮಿಗಳು ಬಂಟ್ವಾಳದಲ್ಲಿ ಭವನ ನಿರ್ಮಿಸಿದ್ದೇ ಪ್ರೇರಣೆಯಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ, ದಿವಂಗತ ನೀರ್ಪಾಜೆ ಒಡನಾಡಿಯಾಗಿದ್ದುಕೊಂಡು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲೆಲ್ಲಾ ಭಾಗವಹಿಸುವ ಮೂಲಕ ಸಾಹಿತ್ಯಪ್ರೇಮಿಯಾಗಿದ್ದ ಗಂಗಾಧರ ಭಟ್, ನೀರ್ಪಾಜೆ ಭೀಮ ಭಟ್ಟ ಅಭಿಮಾನಿಗಳ ಬಳಗದ ಮೂಲಕ ಕಾರ್ಯಕ್ರಮಗಳನ್ನು ಮಾಡಿ ಅವರ ನೆನಪನ್ನು ಸದಾ ಹಸಿರಾಗಿರಿಸಿದರು ಎಂದರು.

ಹಿರಿಯರಾದ ಪ್ರೊ.ವಿ.ಬಿ.ಅರ್ತಿಕಜೆ ಮಾತನಾಡಿ, ಗಂಗಾಧರ ಭಟ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿ ತೊಡಗಿಸಿಕೊಂಡಿದ್ದರು, ನೀರ್ಪಾಜೆ ಅಭಿಮಾನಿಗಳ ಸಂಘಟನೆ ರಚನೆ ಸಂದರ್ಭ ತನ್ನ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದನ್ನು ಸ್ಮರಿಸಿದರು.

ಎಸ್.ವಿ.ಎಸ್. ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರೊಫೆಸರ್ ರಾಜಮಣಿ ರಾಮಕುಂಜ ಮಾತನಾಡಿ, ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ ಗಂಗಾಧರ ಭಟ್ ಅವರು ದಿ.ನೀರ್ಪಾಜೆ ಕನಸನ್ನು ಸಾಕಾರಗೊಳಿಸಿದರು. ಸಹೃದಯಿ, ಮೃದುಭಾಷಿಯಾದ ಗಂಗಾಧರ ಭಟ್, ಕಾರ್ಯಕ್ರಮಗಳ ಆಯೋಜನೆಯ ಸಂದರ್ಭ ಒದಗುವ ಸಂಕಟದ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿ ಹೊಂದಿದ್ದರು ಎಂದರು.

ಕಸಾಪ ಗೌರವ ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್ ಮಾತನಾಡಿ, ಗಂಗಾಧರ ಭಟ್ ಅವರು ಜಾತ್ಯಾತೀತ ನಿಲುವನ್ನು ಹೊಂದಿದ್ದರು. ತನ್ನ ಸಾಹಿತ್ಯಿಕ ಬೆಳವಣಿಗೆಯಲ್ಲಿ ಭಟ್ ಪ್ರೋತ್ಸಾಹವಿತ್ತು ಎಂದರು.ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ವಿ.ಸು.ಭಟ್ ಸ್ವಾಗತಿಸಿ, ನಿರ್ವಹಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts