ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ ಶನಿವಾರ ರಾತ್ರಿ ನಡೆಯಿತು.
ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರದ್ಧಾಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯುವಜನರ ಭಾಗವಹಿಸುವಿಕೆ ಮುಖ್ಯವಾಗಿದ್ದು, ಇಂದಿನ ಪೀಳಿಗೆಯೂ ಧಾರ್ಮಿಕ ಆಚರಣೆಗಳ ಮೂಲತತ್ವವನ್ನು ಅರಿತುಕೊಳ್ಳಬೇಕು. ಭಕ್ತರ ಹೃದಯವೈಶಾಲ್ಯತೆಯಿಂದಾಗಿ ಇಂದು ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿದ್ದು, ಧರ್ಮಾಚರಣೆ ಮತ್ತು ಸಂಸ್ಕಾರಯುತ ಜೀವನದಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ದೇವಸ್ಥಾನದಲ್ಲಿ ಸಾತ್ವಿಕ ಶಕ್ತಿ ಜಾಗೃತವಾಗಬೇಕು. ತಾಯಿ ಉಪಾಸನೆಯಿಮದ ಮಾನವೀಯ ಮೌಲ್ಯಗಳು ಉದ್ದೀಪನಗೊಳ್ಳುತ್ತವೆ. ದೇವಸ್ಥಾನಗಳಿಗೆ ಬಂದ ಮೇಲೆ ನಾವು ದೇವರನ್ನಷ್ಟೇ ಅಲ್ಲದೆ, ಬೇರೆ ಯಾವ ವಿಚಾರಗಳನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಏಕಾಗ್ರತೆಯಿಂದ ಧ್ಯಾನಿಸುವುದು ಅತಿ ಮುಖ್ಯ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ದೇವಿ ಸನ್ನಿಧಿಯಲ್ಲಿ ಪರಿಸರದ ಮಹಿಳೆಯರು ಪಾಲ್ಗೊಂಡು ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು. ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರು, ಉದ್ಯಮಿ ರಘುನಾಥ ಸೋಮಯಾಜಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಐತಪ್ಪ ಆಳ್ವ ಕ್ಷೇತ್ರದ ಹಿನ್ನೆಲೆ ವಿವರಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.