ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ ಪ್ರದೇಶವಾದ ಫರಂಗಿಪೇಟೆಯನ್ನು ಹೊಂದಿರುವ ಪುದು ಗ್ರಾಪಂ ಚುನಾವಣೆಯೂ ಸೇರಿದಂತೆ ಎರಡು ಗ್ರಾಪಂಗಳ ಉಪಚುನಾವಣೆಗಳಿಗೆ ಶನಿವಾರ ಚುನಾವಣೆ ನಡೆಯಲಿದ್ದು, ಇಂದು ಮತಗಟ್ಟೆಗಳಿಗೆ ಮತಪೆಟ್ಟಿಗೆಗಳನ್ನು ತೆಗೆದುಕೊಂಡು ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಬಿ.ಸಿ.ರೋಡಿನಲ್ಲಿರುವ ಆಡಳಿತ ಸೌಧದಿಂದ ತೆರಳಿದರು.
ಪುದು ಗ್ರಾಮ ಪಂಚಾಯಿತಿಯ 10 ವಾರ್ಡುಗಳ 34 ಸ್ಥಾನಗಳಿಗೆ 99 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಲ್ಲಿ 10 ಬೂತ್ ಗಳಿದ್ದು, ಒಂದು ಆಕ್ಸಿಲರಿ ಬೂತ್ ಇದೆ. ಅನಂತಾಡಿ ಮತ್ತು ನೆಟ್ಲಮೂಡ್ನೂರಿನಲ್ಲಿ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಅಲ್ಲಿ ಒಂದೊಂದು ಬೂತ್ ಇದೆ. ಪ್ರತಿ ಬೂತ್ ಗೂ ಐದೈದು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಚುನಾವಣಾ ಶಾಖೆಯ ಉಪತಹಸೀಲ್ದಾರ್ ನವೀನ್ ಬೆಂಜನಪದವು ಹೇಳಿದರು.
ಒಟ್ಟು 65 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಮತಪತ್ರಗಳ ಮೂಲಕ ಚುನಾವಣೆ ಹಳೇ ಪದ್ಧತಿಯಂತೆ ಬೆಳಗ್ಗೆ 7ರಿಂದ 5 ಗಂಟೆವರೆಗೆ ನಡೆಯಲಿದೆ. ಪುದು ಗ್ರಾಪಂನಲ್ಲಿ 13 ಸಾವಿರ ಮತದಾರರಿದ್ದು, 28ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಅಲ್ಲಿಗೆ ಎರಡು ತುಕಡಿ ಕೆಎಸ್ಸಾರ್ಪಿ ಸಿಬ್ಬಂದಿಯೂ ಸೇರಿದಂತೆ ನಾಲ್ವರು ಎಸ್ಸೈ, ಆರು ಎಎಸ್ಸೈಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 11ಬೂ ತ್ ಗಳಲ್ಲಿ 22 ಸಿಬಂದಿ ಕೆಲಸ ಮಾಡುತ್ತಿದ್ದಾರೆ.