ಬಂಟ್ವಾಳ ಕಾಮಾಜೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘದ ನೆರವಿನೊಂದಿಗೆ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ಕಾರ್ಯದ ಮೂಲಕ ಸಮಾನತೆಯನ್ನು ಆಚರಿಸಿದರೆ, ಸಾಮಾಜಿಕ ನ್ಯಾಯವನ್ನು ಕಾಣಬಹುದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ ಸಿ ಆಗಿರುವ ಕೃಷ್ಣಮೂರ್ತಿ ಎನ್. ಹೇಳಿದರು.
ಸಂವಿಧಾನದ ಮೂಲತತ್ವದಲ್ಲಿ ಸಾಮಾಜಿಕ ನ್ಯಾಯ ಅಗ್ರಸ್ಥಾನದಲ್ಲಿರುತ್ತದೆ ಎಂದು ಹೇಳಿದ ಅವರು, ಸಮಾನತೆಯ ಆಶಯವನ್ನು ಈಡೇರಿಸುವುದು ಎಲ್ಲರ ಕರ್ತವ್ಯ ಎಂದರು.
ಈ ಸಂದರ್ಭ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಪ್ರಕಾಶ್ಚಂದ್ರ ಶಿಶಿಲ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಕೇಂದ್ರ ಸರಕಾರದ ಪರ ಜಿಲ್ಲಾ ನ್ಯಾಯವಾದಿ ಪಿ.ಪ್ರಸಾದ್ ಕುಮಾರ್ ರೈ ಸಾಮಾಜಿಕ ನ್ಯಾಯದ ಬಗ್ಗೆ ಕಾನೂನು ಮಾಹಿತಿ ನೀಡಿದರು.
ವಕೀಲರ ಸಂಘ ಬಂಟ್ವಾಳ ಅಧ್ಯಕ್ಷರಾದ ಬಿ.ಗಣೇಶಾನಂದ ಸೋಮಯಾಜಿ, ಸಹಾಯಕ ಸರಕಾರಿ ಅಭಿಯೋಜಕರಾದ ಹರಿಣಿಕುಮಾರಿ ಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಐಕ್ಯೂಎಂಸಿ ಘಟಕದ ಸಂಯೋಜಕ ಡಾ. ಸತೀಶ್ ಗಟ್ಟಿ ಸ್ವಾಗತಿಸಿದರು. ಪ್ರೊ.ಶಶಿಕಲಾ ವಂದಿಸಿದರು. ವಿದ್ಯಾರ್ಥಿನಿ ಚಿತ್ರಾವತಿ ಕಾರ್ಯಕ್ರಮ ನಿರ್ವಹಿಸಿದರು.