ಯಕ್ಷಗಾನ

ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಬೊಂಡಾಲ ಪ್ರಶಸ್ತಿ: ಫೆಬ್ರವರಿ 17 ರಂದು ಪ್ರದಾನ

ಚಿತ್ರಕೃಪೆ: ಯಕ್ಷಮಾಧವ… ಒದಗಿಸಿದವರು: ಸಂಘಟಕರು.

ಬಂಟ್ವಾಳ: ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2022 – 23 ನೇ ಸಾಲಿಗೆ ಪುಂಡಿಕಾಯಿ ಅವರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ರೂ. 10,000 ನಗದು; ಶಾಲು,ಸ್ಮರಣಿಕೆ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ

ಫೆಬ್ರವರಿ 16 ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ದಾನಶೂರ ಕರ್ಣ’  ಹಾಗೂ 17 ರಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ. ಫೆಬ್ರವರಿ 17 ರಂದು ಶುಕ್ರವಾರ ರಾತ್ರಿ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರ ಅಧ್ಯಕ್ಷತೆಯಲ್ಲಿ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಮಾಜಿ ಸಚಿವ ಬಿ. ರಮಾನಾಥ ರೈ, ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅತಿಥಿಗಳಾಗಿ ಭಾಗವಹಿಸುವರು ಎಂದು  ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪುಂಡಿಕಾಯಿ ಗೋಪಾಲಕೃಷ್ಣ ಭಟ್:

ಬಲಿಪ ಪರಂಪರೆಯ ಪ್ರಮುಖ ಕೊಂಡಿಯಾಗಿರುವ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಜನಿಸಿದ್ದು 1973 ಮೇ 14ರಂದು; ತಂದೆ ಗೋವಿಂದ ಭಟ್, ತಾಯಿ ಭವಾನಿ. ಅಡ್ಯನಡ್ಕದಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಪೂರೈಸಿ ವಿಟ್ಲ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಬಳಿಕ ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು.

ಯಕ್ಷಗಾನದ ಹಾಡುಗಾರಿಕೆಯಲ್ಲಿ ಆಸಕ್ತರಾದ ಗೋಪಾಲಕೃಷ್ಣ ಭಟ್ಟರಿಗೆ ಮಾವ ಬಲಿಪ ನಾರಾಯಣ ಭಾಗವತರೇ ಆರಂಭಿಕ ಗುರುಗಳು. ಬಲಿಪ ವಿಶ್ವೇಶ್ವರ ಭಟ್ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಭಾಗವತಿಕೆಯ ವಿವಿಧ ಆಯಾಮಗಳನ್ನು ಕಲಿತ ಅವರು ಕುಬಣೂರು ಶ್ರೀಧರಾಯರ ಮಾರ್ಗದರ್ಶನದಲ್ಲಿ ಯಕ್ಷಗಾನವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಪ್ರಥಮವಾಗಿ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ ಪುಂಡಿಕಾಯಿ ಬಳಿಕ ಕಾಟಿಪಳ್ಳ ಮೇಳದಲ್ಲಿ ಮತ್ತೊಂದು ವರ್ಷ ದುಡಿದರು. ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ 27 ವರ್ಷಗಳನ್ನು ಪೂರೈಸಿ ಕಳೆದ ಆರು ವರ್ಷಗಳಿಂದ ಪ್ರಧಾನ ಭಾಗವತರಾಗಿ ಪ್ರಸ್ತುತ ಆರನೇ ಮೇಳದಲ್ಲಿ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ

ಯಕ್ಷಗಾನದ ಘರಾನವೆನಿಸಿದ ಬಲಿಪ ಶೈಲಿಯ ಹಾಡುಗಾರಿಕೆಯಲ್ಲಿ ಜನಪ್ರಿಯತೆ ಗಳಿಸಿರುವ ಪುಂಡಿ ಕಾಯಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನದ ಸಂಪ್ರದಾಯಗಳನ್ನು ತಿಳಿದ ಕೆಲವೇ ಭಾಗವತರಲ್ಲಿ ಒಬ್ಬರು. ಪತ್ನಿ ಹೇಮಲತಾ ಹಾಗೂ ಮಕ್ಕಳಾದ ದುರ್ಗಾ ಕಿರಣ್ ಮತ್ತು ಭವಾನಿಯವರನ್ನೊಳಗೊಂಡ ಸಂತ್ರಪ್ತ ಸಂಸಾರ ಹೊಂದಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts