ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನವು ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಇದೇ 8ರಿಂದ 10ರತನಕ ಬ್ರಹ್ಮಕಲಶೋತ್ಸವ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ’ಪರಶುರಾಮ ಋಷಿ ತಪಸ್ಸು ಮಾಡಿದ ಪುಣ್ಯ ತಪೋಭೂಮಿ’ ಎಂದೇ ಗುರುತಿಸಿಕೊಂಡ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನವು ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಅವರ ಆಧ್ಯಾತ್ಮಿಕ ಸಾಧನೆಯ ಪ್ರತೀಕವಾಗಿದೆ ಎಂದರು.
ಇದೇ 8ರಂದು ಸಂಜೆ ಗಂಟೆ 3.30ಕ್ಕೆ ವಗ್ಗ ರಾಷ್ಟ್ರೀಯ ಹೆದ್ದಾರಿ ಕಾರಿಂಜ ಕ್ರಾಸ್ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡುವರು. ಅಂದು ರಾತ್ರಿ ಗಂಟೆ 8.30ಕ್ಕೆ ’ಪರಿಮಳ ಕಾಲೊನಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.9ರಂದು ಬೆಳಿಗ್ಗೆ ಗಂಟೆ ೯.೨೮ಕ್ಕೆ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣ್ಣಾಯ ಮತ್ತು ನಾರಾಯಣ ಶಿಬರಾಯರ ಮಾರ್ಗದರ್ಶನದಲ್ಲಿ ಮಹಾಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆ, ಪರಿವಾರ ದೈವಗಳ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಉಳಿಯ ಧರ್ಮ ಅರಸು ಉಳ್ಳಾಲ್ತಿ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಬಿ.ಮಂಜುನಾಥ ಭಂಡಾರಿ, ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸವರು ಎಂದರು. ಸಂಜೆ ೬ ಗಂಟೆಗೆ ಕಟೀಲು ಮೇಳದಿಂದ ’ಗಾಯತ್ರಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಫೆ.10ರಂದು ಬೆಳಿಗ್ಗೆ ದೇವರಿಗೆ ಬ್ರಹ್ಮಕಲಶಾಭಿಷೇಕ, ಗಾಯತ್ರಿ ಯಾಗ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ತ ಸ್ವಾಮೀಜಿ ಮತ್ತು ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಹರೀಶ ಪೂಂಜ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಉಪ ಮೇಯರ್ ಪೂರ್ಣಿಮಾ, ಮಜಿ ಸಭಾಪತಿ ವಿ.ಆರ್.ಸುದರ್ಶನ್, ಡಾ.ಎಂ.ಮೋಹನ ಆಳ್ವ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು.
ಹಿನ್ನೆಲೆ: ಇಲ್ಲಿನ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತನ್ನ ೧೬ ನೇ ವಯಸ್ಸಿನಲ್ಲೇ ದೇವರ ಪ್ರೇರಣೆಯಂತೆ ಪಿಲಿಂಗಾಲು ಗುಡ್ಡ ಪ್ರದೇಶದಲ್ಲಿ ಪುಟ್ಟ ಗುಡಿ ನಿರ್ಮಿಸಿ ದೇವರ ಭಜನೆ ಆರಂಭಿಸಿದ್ದರು. ೧೮ನೇ ವಯಸ್ಸಿನಲ್ಲಿ ಮಂತ್ರಾಲಯಕ್ಕೆ ತೆರಳಿ ೨೮ ವರ್ಷಗಳ ಕಾಲ ವಿವಿಧ ವೈದಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ಸಹಿತ ಜ್ಯೋತಿಷ್ಯ ಮತ್ತು ನಾಟಿವೈದ್ಯ ವಿದ್ಯೆ ಕರಗತ ಮಾಡಿಕೊಂಡಿದ್ದಾರೆ. ಕಳೆದ ೨೦೦೬ರಲ್ಲಿ ಗರ್ಭಗುಡಿ ನಿರ್ಮಿಸಿ ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಮೂಲಕ ಗಾಯತ್ರಿ ದೇವರ ಶಿಲಾ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನೆರವೇರಿಸಿದ್ದರು. ಹಿಂದುಳಿದ ವರ್ಗ ಗಾಣಿಗ ಸಮಾಜದಲ್ಲಿ ಜನಿಸಿದ ಕೆ.ಎಸ್.ಪಂಡಿತರು ಬ್ರಹ್ಮಚಾರಿಯಾಗಿ, ತನಗೆ ಪೂರ್ವಾಶ್ರಮದಿಂದ ದೊರೆತ ಜಮೀನಿನಲ್ಲಿ ತೆಂಗು, ಕಂಗು, ಬಾಳೆ ಕೃಷಿ ಜೊತೆಗೆ ಪುಟ್ಟ ಗೋಶಾಲೆಯಲ್ಲಿ ಹೈನುಗಾರಿಕೆ ಮೂಲಕ ದೇವಳಕ್ಕೆ ಸುತ್ತುಗೋಪುರ ನಿರ್ಮಿಸಿ ದೇವರಿಗೆ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಸುತ್ತಾ ಹಠಯೋಗದ ಮೂಲಕ ಧ್ಯಾನಾಸಕ್ತರಾಗಿ ಆಧ್ಯಾತ್ಮಿಕ ಸಾಧನೆಯಿಂದಲೇ ಗಮನ ಸೆಳೆದಿದ್ದಾರೆ. ಇದೀಗ ಭಕ್ತರ ನೆರವಿನಲ್ಲಿ ದೇವಳಕ್ಕೆ ಮುಖಮಂಟಪ, ಮಹಾಗಣಪತಿ ಗುಡಿ, ರಾಘವೇಂದ್ರ ಸ್ವಾಮಿ ಗುಡಿ, ನಾಗನಕಟ್ಟೆ, ಪಂಜುರ್ಲಿ ದೈವಸ್ಥಾನ ನಿರ್ಮಾಣಗೊಂಡಿದೆ. ಧರ್ಮದ್ಥಳ ಗ್ರಾಮಾಂಬಿವೃದ್ಧಿ ಯೋಜನೆ ಮತ್ತು ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ ಸಹಿತ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಶ್ರಮದಾನ ನಡೆಸಿ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕಳೆದ ೪೮ ವರ್ಷಗಳಿಂದ ವಾರ್ಷಿಕ ಭಜನಾ ಮಂಗಳೋತ್ಸವ, ೧೬ ವರ್ಷಗಳಿಂದ ಪ್ರತಿಷ್ಠಾ ವಧಂತಿ ಉತ್ಸವ, ಗಾಯತ್ರಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಮೂಹಿಕ ಆಶ್ಲೇಷ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ ಹಾಗೂ ಮೋಹನ್ ಕೆ.ಶ್ರೀಯಾನ್ ರಾಯಿ ಇದ್ದರು.