ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಬಂಟ್ವಾಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಾಗೂ ರಾಜ್ಯದಲ್ಲಿ ದ್ವಿತೀಯ ಘಟಕವಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ನಿರ್ಮಾಣವಾದ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮಿಣಿಗುರಿ ಎಂಬಲ್ಲಿ ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಇಂದು ಆಹಾರ ಮತ್ತು ಮಲತ್ಯಾಜ್ಯ ವಿಲೇವಾರಿಗಳು ಗ್ರಾಮ ಪಂಚಾಯಿತಿಗಳಿಗೆ ಆದಾಯದ ಮೂಲವಾಗಿ ಪರಿವರ್ತನೆ ಹೊಂದುತ್ತಿದ್ದು, ಗೋಳ್ತಮಜಲು ಗ್ರಾಮದಲ್ಲಿ ನಿರ್ಮಾಣಗೊಂಡ ಈ ಘಟಕವು ಮಾದರಿ ಘಟಕವಾಗಿ ರೂಪುಗೊಳ್ಳಲಿ ಎಂದು ಶುಭ ಹಾರೈಸಿದರು. ಜನರ ಮನಸ್ಸಿನಲ್ಲಿ ಈ ಘಟಕದಿಂದ ಆಗುವ ಲಾಭ ಮತ್ತು ಸ್ವಚ್ಛತೆಗೆ ನೀಡುವ ಕಾಳಜಿಯ ಕುರಿತ ಪರಿವರ್ತನೆ ಕುರಿತು ತಿಳಿಹೇಳುವ ಅಗತ್ಯವಿದ್ದು, ಬದಲಾದ ಕಾಲಘಟ್ಟದಲ್ಲಿ ಜನತೆಯೂ ಉತ್ತಮ ಉದ್ದೇಶವಿಟ್ಟುಕೊಂಡು ಮಾಡುವ ಇಂಥ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ದ.ಕ.ಜಿಪಂನ ಸ್ವಚ್ಛ ಭಾರತ್ ಮಿಷನ್ (ಗ್ರಾ) ನೋಡಲ್ ಅಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಕೆ.ಆನಂದ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ದ.ಕ.ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜಿ.ನರೇಂದ್ರಬಾಬು ತಾಂತ್ರಿಕ ವಿಷಯಗಳನ್ನು ವಿವರಿಸಿದರು. ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು ಗ್ರಾಪಂ ಅಧ್ಯಕ್ಷ ಅಭಿಷೇಕ್ ಎನ್, ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು, ಇಂಜಿನಿಯರ್ ಕುಶಕುಮಾರ್, ತಾಪಂ ಸಹಾಯಕ ನಿರ್ದೇಶಕ ದಿನೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಬಂಟ್ವಾಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಕೆ.ನಾಯಕ್ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿದರು. ಗೋಳ್ತಮಜಲು ಪಿಡಿಒ ವಿಜಯಶಂಕರ ಆಳ್ವ, ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.