ವಿಟ್ಲ

ಉಡುಪಿ ಕಾಸರಗೋಡು ಹೈಟೆನ್ಶನ್ ಮಾರ್ಗ: ದ.ಕ. ಜಿಲ್ಲಾಧಿಕಾರಿ ಕಾರ್ಯವೈಖರಿಗೆ ರೈತಸಂಘ ಗರಂ

ಉಡುಪಿ – ಕಾಸರಗೊಡು ೪೦೦ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ರಚನೆಯ ವಿಚಾರಕ್ಕೆ ಸಂಬಂಧಿಸಿ  ದ. ಕ. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ಕರ್ನಾಟಕ ರಾಜ್ಯ ರೈತಸಂಘ ತೀವ್ರ ಟೀಕಾಪ್ರಹಾರ ಮಾಡಿದ್ದು, ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು, ಜಿಲ್ಲಾಧಿಕಾರಿಗಳು ರೈತರ ಸಭೆಯನ್ನು ನಡೆಸದೆ, ಗ್ರಾಮ ಮಟ್ಟದಲ್ಲಿ ರೈತರಿಗೆ ಯಾವುದೇ ಮಾಹಿತಿಯನ್ನೂ ನೀಡದೆ, ಖಾಸಗೀ ಕಂಪನಿ ಹಿತ ಕಾಪಾಡುತ್ತಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೪೦೦ಕೆ.ವಿ. ವಿದ್ಯುತ್ ಮಾರ್ಗ ಹೋಗುವ ದಾರಿಯನ್ನು ೨೦೧೫ರಿಂದ ಇಲ್ಲಿಯ ತನಕ ನೀಡದೆ ಸ್ಯಾಟಲೈಟ್ ಹಾಗೂ ಹೆಲಿಕಾಪ್ಟರ್ ಬಳಸಿ ಸರ್ವೇ ಕಾರ್ಯಗಳನ್ನು ಕಂಪನಿ ಮಾಡಿದ್ದು, ಅದನ್ನೇ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಅವರು ದೂರಿದ್ದು,. ಜಿಲ್ಲೆಯಲ್ಲಿ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಸಿಕ್ಕ ಒಂದು ಎಕ್ರೆ ಅರ್ಧ ಎಕ್ರೆ ಕೃಷಿ ಭೂಮಿಯಲ್ಲಿ ಸಣ್ಣ ಹಾಗೂ ಅತೀ ಸಣ್ಣ ಅತೀ ಸಣ್ಣ ರೈತರು ಕೃಷಿ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಈ ವಿದ್ಯುತ್ ಮಾರ್ಗದಿಂದ ಸಂಪೂರ್ಣ ಕೃಷಿಯನ್ನು ಕಳೆದುಕೊಂದು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಕೇರಳದಲ್ಲಿ ವಿದ್ಯುತ್ ಮಾರ್ಗ ರಚನೆಗೆ ಕೃಷಿ ಭೂಮಿಗಳು ಅಡ್ಡಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಪೂರ್ಣ ಯೋಜನೆಯನ್ನೇ ಕೈಬಿಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಕೇರಳ ವಿದ್ಯುತ್ ಮಾರ್ಗ ಹೋಗಲು ಅಡಿಕೆ, ತೆಂಗು, ಗೇರು, ರಬ್ಬರ್ ತುಂಬಿರುವ ಕೃಷಿ ಭೂಮಿಯನ್ನೇ ಬಳಸಿಕೊಳ್ಳಲಾಗುತ್ತಿರುವುದು ವಿಪರ್ಯಾಸವಾಗಿದೆ. ಮಾಹಿತಿ ನೀಡದೆ ಸರ್ವೆಗೆ ಬಂದ ಸಂದರ್ಭ ಜಿಲ್ಲಾಧಿಕಾರಿಗಳಿಗೆ ನಮ್ಮ ಕೃಷಿ ಜೀವನಕ್ಕೆ ಸಮಸ್ಯೆ ಮಾಡುವ ಯೋಜನೆ ನಮ್ಮೂರಲ್ಲಿ ಬರುವುದು ಬೇಡವೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕರ್ನಾಟಕ ಉಚ್ಛನ್ಯಾಯಾಲಯ ರೈತರ ಹವಾಲುಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವಂತೆ ನಿರ್ದೇಶನ ನೀಡಿದರೂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ರೈತರ ಸಭೆಯನ್ನು ಕಾಟಾಚಾರಕ್ಕೆ ನಡೆಸಿ, ಅವರು ಹೇಳಿದ್ದನೇ ಕೇಳಬೇಕೆಂದು ಹೇಳಿದ್ದರಿಂದ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.

ಅರಣ್ಯ ಭೂಮಿಯ ಮೂಲಕ ಹೋಗುವುದರಿಂದ ೧೦ ಸಾವಿರಕ್ಕೂ ಅಧಿಕ ಮರಗಳ ನಾಶವಾಗದೆ. ಇದರಿಂದ ಹವಾಮಾನದ ಮೇಲೆ ತೀವ್ರ ಪರಿಣಾಮವನ್ನು ಬೀರಲಿದೆ. ೪೦೦ಕೆ.ವಿ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಮನುಷ್ಯ ಸೇರಿ ಜೀವ ಸಂಕುಲದ ಮೇಲೆ ತೀವ್ರ ಪರಿಣಾಮವನ್ನು ಬೀರುವ ಬಗ್ಗೆ ವೈಜ್ಞಾನಿಕ ವರದಿಗಳಿದ್ದರೂ, ಸರ್ಕಾರ ಹಾಗೂ ಜಿಲ್ಲಾಡಳಿತ ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಿದೆ ಆರೋಪಿಸಿದರು.

ಕಂಪನಿಗಳಿಗೆ ಲಾಭಮಾಡುವ ಉದ್ದೇಶದಿಂದ ರೈತರನ್ನು ಬೀದಿಗೆ ಹಾಕುವ ಕಾರ್ಯ ಮಾಡುವ ಕಾರ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಭೂಮಿ ನಮ್ಮ ಹಕ್ಕಾಗಿದ್ದು, ಅದನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ರೈತರ ಕೃಷಿ ಭೂಮಿಯನ್ನು ಬಿಟ್ಟು, ಕಂಪನಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ. ಕಂಪನಿ ಹಾಗೂ ಜಿಲ್ಲಾಡಳಿತ ನಮ್ಮ ಹೆಣದ ಮೇಲೆ ವಿದ್ಯುತ್ ಮಾರ್ಗ ನಿರ್ಮಿಸಲಿ ಎಂದು ಒತ್ತಾಯಿಸಿದರು.ಉಡುಪಿ ಕಾಸರಗೋಡು ೪೦೦ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಂತ್ರಸ್ತ ರೈತರಾದ ಚಿತ್ತರಂಜನ್, ವಾಸು ಗೌಡ, ರಾಬರ್ಟ್ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ