ಧರ್ಮ ಎಂಬುದು ದೇವಸ್ಥಾನ, ಮಠ, ಮಂದಿರಗಳಿಗಷ್ಟೇ ಸೀಮಿತವಾಗಿರಬಾರದು, ಮನೆಯೊಳಗೂ ಆಚರಣೆಯಾಗಬೇಕು. ಬ್ರಹ್ಮಕಲಶೋತ್ಸವಗಳು ಒಗ್ಗಟ್ಟು ಪಾಠದ ಜೊತೆಗೆ ಮನೆಯಿಂದಲೇ ಧರ್ಮರಕ್ಷಣೆ ಮಾಡೋಣ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ವೇಳೆ ನಂದಾವರ ಕ್ಷೇತ್ರದೊಂದಿಗಿನ ಶ್ರೀರಾಮಚಂದ್ರಾಪುರ ಮಠದ ಸಂಬಂಧಗಳನ್ನು ಸ್ಮರಿಸಿದ ಅವರು, ಸನಾತನ ಹಿಂದು ಧರ್ಮಕ್ಕೆ ದೇವಸ್ಥಾನ, ಮಠ, ಮಂದಿರ, ಗೋಶಾಲೆಗಳು ಕೋಟೆಗಳಾಗಿವೆ. ಇತ್ತೀಚೆಗೆ ಶ್ರದ್ಧಾಕೇಂದ್ರಗಳ ಕುರಿತ ಆಸ್ಥೆ ಮೂಡುತ್ತಿದೆ. ಧರ್ಮ ಎಂಬುದು ಮನೆಗೆ ಬರಬಾರದು ಎಂಬ ಭಾವವೂ ಮೂಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಧರ್ಮಸಂರಕ್ಷಣೆಗೆ ಒಗ್ಗಟ್ಟು ಅಗತ್ಯ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ನಮ್ಮ ದೇವರ ಬಗ್ಗೆ ನಮಗೇ ಸಂಶಯ ಮೂಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ನಮ್ಮಲ್ಲಿ ಒಗ್ಗಟ್ಟು, ಸಂಪ್ರದಾಯಪಾಲನೆ ಅಗತ್ಯ ಎಂದರು.
ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸಿ ಮಾತನಾಡಿ, ದೇವಸ್ಥಾನಕ್ಕೆ ಬರಲು ವ್ಯವಸ್ಥಿತವಾದ ರಸ್ತೆ ನಿರ್ಮಿಸಲು 10 ಕೋಟಿ ನಿಗದಿಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ನಿಗದಿಗೊಳಿಸಲಾಗುವುದು ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಅರವಿಂದ ಭಟ್ ಪದ್ಯಾಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಳಂದಿಲ, ಕಾರ್ಯಾಧ್ಯಕ್ಷ ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಉದ್ಯಮಿ ವಿನಯಪ್ರಕಾಶ್ ಸಿಂಗ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉದ್ಯಮಿ ರವೀಂದ್ರನಾಥ ಶೆಟ್ಟಿ ಪುಣ್ಕೆಮಜಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಉದ್ಯಮಿ ರಘುನಾಥ ಸೋಮಯಾಜಿ, ಏಕನಾಥೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಉದ್ಯಮಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ವಿಶ್ವ ದೇವಾಡಿಗ ಮಹಾಮಂಡಲ ಮೋಹನದಾಸ್ ಹಿರಿಯಡ್ಕ, ಮಾಗಣೆ ತಂತ್ರಿ ಸುಬ್ರಮಣ್ಯ ತಂತ್ರಿ, ಉದ್ಯಮಿ ಮೋಹನ ಶೆಟ್ಟಿ ಮುಂಬೈ, ಆರ್ಥಿಕ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ನಂದಾವರ ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿ ಸಂಚಾಲಕ ಜಯಶಂಕರ ಬಾಸ್ರಿತ್ತಾಯ ವಂದಿಸಿದರು.