ನೆಲ, ಜಲಕ್ಕೆ ಅಪಾಯ ಉಂಟಾದರೆ, ಕರಾವಳಿ ಕರ್ನಾಟಕದ ಇಡೀ ತುಳು ಸಂಸ್ಕೃತಿಗೂ ಹೊಡೆತ ಬೀಳುತ್ತದೆ ಎಂದು ಒಡಿಯೂರಿನಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸೋಮವಾರ ನಡೆದ ತುಳು ಸಾಹಿತ್ಯ ಸಮ್ಮೇಳನದಲ್ಲಿ ನೆಲ, ಜಲ, ನಲಿಕೆ, ತೆಲಿಕೆ ಬಗ್ಗೆ ನಡೆದ ‘ತುಳು ತುಳಿಪು’ ವಿಚಾರ ಮಂಥನದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಮಾತನಾಡಿ ನೆಲಮೂಲವಾದ ಆಚರಣೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು, ಸತ್ಯ ಧರ್ಮ ಎಂಬುದು ತುಳುನಾಡಿನ ಮೌಲ್ಯ ಮತ್ತು ಶಕ್ತಿಗಳು ಎಂದರು. ನೆಲದ ಬಗ್ಗೆ ತುಳುವರಿಗೆ ಪೂಜನೀಯ ಭಾವನೆಯಿದ್ದು, ಆರಾಧನೆ – ಆಚರಣೆಗಳ ಮೂಲಕ ಕೃಷಿ ಮಾಡಲಾಗುತ್ತಿತ್ತು. ನೆಲಮೂಲ ಆಚರಣೆಯಲ್ಲಿರುವ ತುಳುನಾಡಿನಲ್ಲಿ ಆಹಾರಕ್ಕೆ ಕೊರತೆ ಬಂದರೆ ವಿಷಕ್ಕಿಂತ ಅಪಾಯಕಾರಿ ಎಂಬ ಕಲ್ಪನೆಯಿತ್ತು. ಇಂದು ನೆಲವನ್ನು ನೋಡುವ ದೃಷ್ಠಿ ಬದಲಾಗಿದ್ದು, ಪೂಜನೀಯ ಭಾವನೆ ಕಡಿಮೆಯಾಗಿ ವಾಣಿಜ್ಯದತ್ತ ವಾಲುತ್ತಿದೆ ಎಂದರು.
ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಮಾತನಾಡಿ ನೇತ್ರಾವತಿ ನದಿ ತಿರುವು ಯೋಜನೆಗಳು ಇಡೀ ಜಲಮೂಲಕ್ಕೆ ಅಪಾಯಕಾರಿಯಾಗಿದೆ. ಕೈಗಾರಿಕೀಕರಣದ ಮೂಲಕ ನದಿ ಮೂಲಗಳಿಗೆ ಕೈಹಾಕಿರುವುದು ಮನುಕುಲಕ್ಕೆ ಅಪಾಯದ ಸೂಚಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀರಿನ ಮೂಲಗಳಾದ ಕೆರೆಗಳು ಮಾಯವಾಗುತ್ತಿವೆ. ನದಿ ತಿರುವಿನಂತಹ ಕಾರ್ಯಗಳು ಭವಿಷ್ಯದಲ್ಲಿ ಪರಿಸರಕ್ಕೆ ಮಾರಕವಾಗಿದೆ. ಆಧುನಿಕತೆಯ ಹೆಸರಿನಲ್ಲಿ ನೀರನ್ನು ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ. ಕುಡಿಯುವ ನೀರಿನ ಮೌಲ್ಯವನ್ನು ಅರಿತು ಬಳಸುವ ಕಾರ್ಯವಾಗಬೇಕು ಎಂದು ಹೇಳಿದರು.
ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ಮಾತನಾಡಿ ನೆಲ – ಜಲ ಸರಿಯಿದ್ದಾಗ ಸಮಾಜದಲ್ಲಿ ಸಂತೋಷ ಉಳಿಯುತ್ತದೆ. ದುಡಿ ನಲಿಕೆಯಿಂದ – ಭರತನಾಟ್ಯದವರೆಗೆ ವಿವಿಧ ನೃತ್ಯ ಪ್ರಾಕಾರಗಳಿದ್ದು, ಜನಪದ ಕಲೆಯ ಒಳಗೆ ಬದುಕಿನ ಸಾರ ಹುದುಗಿದೆ. ವೈಜ್ಞಾನಿಕ ಜೀವನ ಹಾಗೂ ಔಧ್ಯೋಗಿಕರಣಕ್ಕೆ ಮಾರುಹೋಗಿ, ತುಳುನಾಡಿನ ನೃತ್ಯ ಪ್ರಾಕಾರಗಳು ನಶಿಸುತ್ತಿದೆ. ತುಳುನಾಡಿನ ಮಣ್ಣಿನ ಗುಣದಿಂದ ಸಂಸ್ಕೃತಿಗೆ ಅಳಿವಿಲ್ಲ ಎಂದು ತಿಳಿಸಿದರು. ರಾಜಶ್ರೀ ಟಿ. ರೈ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕನ್ಯಾನ ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.