ಬಂಟ್ವಾಳ: ಬಂಟ್ವಾಳದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕರಾವಳಿ ಕಲೋತ್ಸವ ಕಾರ್ಯಕ್ರಮದ ಏಳನೇ ದಿನದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಜನಸಾಮಾನ್ಯರು ಮತ್ತು ಕಾನೂನು ಎಂಬ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬಂಟ್ವಾಳ, ರೋಟರಿ ಕ್ಲಬ್, ಚಿಣ್ಣರಲೋಕ ಸೇವಾಬಂಧು ಬಂಟ್ವಾಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಬಂಟ್ಚಾಳದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್ ಚಾಲನೆ ನೀಡಿದರು.
ಕಾನೂನು ತಿಳುವಳಿಕೆ ಇದ್ದರೆ ಅನಾವಶ್ಯಕ ಪ್ರಕರಣಗಳು ಕೋರ್ಟಿಗೆ ಬರುವುದಿಲ್ಲ ಎಂದು ಹೇಳಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ, ಕಾನೂನಿನ ಅರಿವು ಜನರಲ್ಲಿ ಅವಶ್ಯಕವಾಗಿದ್ದು, ಈ ಕುರಿತು ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.
ಹುಟ್ಟಿನಿಂದ ಸಾವಿನವರೆಗೆ ಕಾನೂನು ಚೌಕಟ್ಟನ್ನು ಒಳಗೊಂಡು ನಾವು ವ್ಯವಹರಿಸುತ್ತೇವೆ ಎಂದು ಹೇಳಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ, ಕಾನೂನು ಪಾಲನೆ ನಮ್ಮ ಜೀವನದುದ್ದಕ್ಕೂ ಅಳವಡಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಗಣೇಶಾನಂದ ಸೋಮಯಾಜಿ ಮಾತನಾಡಿ, ಎಲ್ಲರಿಕ್ಕಿಂತ ಮಿಗಿಲು ಕಾನೂನು ಇರುತ್ತದೆ, ನಿಯಮಗಳ ಪಾಲನೆ ಮುಖ್ಯವಾಗುತ್ತದೆ ಎಂದರು.
ಪೊಲೀಸ್ ಎಸ್.ಐ. ರಾಮಕೃಷ್ಣ, ಟ್ರಾಫಿಕ್ ಎಸ್ಸೈ ಮೂರ್ತಿ, ರೋಟರಿ ಕ್ಲಬ್ ವಿಟ್ಲ ಅದ್ಯಕ್ಷ ಪ್ರಕಾಶ್ ನಾಯಕ್, ಚಿಣ್ಣರ ಅಧ್ಯಕ್ಷೆ ಸಾನ್ವಿ ಸುಧೀರ್ ಶೆಟ್ಟಿ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಜಯರಾಮ ರೈ ಉಪಸ್ಥಿತರಿದ್ದರು. ಚಿಣ್ಣರಲೋಕ ಕಾರ್ಯದರ್ಶಿ ಸೌಮ್ಯ ಭಂಡಾರಿಬೆಟ್ಟು ಸ್ವಾಗತಿಸಿದರು. ಮಹಮ್ಮದ್ ಗಝಾಲಿ ಕಾರ್ಯಕ್ರಮ ನಿರ್ವಹಿಸಿದರು.