ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಅವರ 75 ಲಕ್ಷ ರೂ ಅನುದಾನದಿಂದ ಬಂಟ್ವಾಳ ಕಾಮಾಜೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಲಾದ ಸೆಮಿನಾರ್ ಹಾಲ್ ಅನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಾಲೇಜುಗಳನ್ನು ಇಂದು ನೈತಿಕ ಶಿಕ್ಷಣದ ಕೊರತೆ ಉಂಟಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದ ಜೊತೆಗೆ ಜೀವನ ಮೌಲ್ಯಗಳನ್ನು ಅರಿತುಕೊಳ್ಳುವ ಕಾರ್ಯವಾಗಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಕುಮಾರ್ ರೈ ಶುಭ ಹಾರೈಸಿದರು. ಈ ಸಂದರ್ಭ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭಾಸ್ಕರ ಕಾಮಾಜೆ, ಉಮೇಶ್, ಸ್ಥಳದಾನಿ ರೋಷನ್ ಮಿನೇಜಸ್, ಕಾಲೇಜಿನ ಹಿತೈಷಿ ಫೆಲಿಕ್ಸ್ ಡಿಸೋಜ, ಅಭಿಯಂತರ ಪ್ರಮೋದ್ ಉಪಸ್ಥಿತರಿದ್ದರು. ಕಾಲೇಜು ಪ್ರಿನ್ಸಿಪಾಲ್ ಡಾ. ಪ್ರಕಾಶಚಂದ್ರ ಬಿ. ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಅಚ್ಯುತ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಾದ ಪ್ರೊ.ಹೈದರಾಲಿ, ಪ್ರೊ.ಶಶಿಕಲಾ, ಕವಿತಾ, ಪ್ರೊ.ಬಾಲಸುಬ್ರಹ್ಮಣ್ಯ, ಅಪರ್ಣಾ ಆಳ್ವ ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭ ಇತ್ತೀಚೆಗೆ ನಿಧನರಾದ ಕೆ.ಸೇಸಪ್ಪ ಕೋಟ್ಯಾನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.