ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಸವಿತಾ ಮಹರ್ಷಿ ಜಯಂತಿ ಆಚರಣೆಯು ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉತಹಶೀಲ್ದಾರ್ ರಾಜೇಶ್ ನಾಯ್ಕ್ ಮಾತನಾಡಿ, ಸವಿತಾ ಸಮಾಜದ ಆದರ್ಶ ಪುರುಷನಾಗಿ ಸಮಾಜಕ್ಕೆ ಗೌರವ ತಂದುಕೊಟ್ಟು ಸವಿತಾ ಮಹರ್ಷಿಯ ಜಯಂತಿಯನ್ನು ಆಚರಿಸುವುದು ಅರ್ಥಪೂರ್ಣವಾಗಿದ್ದು, ಈ ಆಚರಣೆಯ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರೇರಣೆ ಸಿಗಲಿ ಎಂದರು.
ಬಿ.ಸಿ.ರೋಡು ಸವಿತಾ ಸೌಹರ್ದಾ ಸಹಕಾರಿಯ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಮಾತನಾಡಿ, ಸುಮಾರು 27 ಉಪಜಾತಿಗಳನ್ನು ಒಳಗೊಂಡ ಸವಿತಾ ಸಮಾಜವು ಹಿಂದುಳಿದ ಸಮಾಜವಾಗಿ ಬೆಳೆದು ಬಂದಿದ್ದು, ಸರಕಾರವು ಈ ಸಮಾಜಕ್ಕೆ ಮನ್ನಣೆ ನೀಡಿ ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಅವಕಾಶ ನೀಡಿದೆ. ಸಂಖ್ಯೆಯಲ್ಲಿ ಸಣ್ಣ ಸಮಾಜವಾದರೂ ನಾವು ಸಂಘಟಿತರಾಗಿ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಹೊಸ ಯೋಜನೆ-ಯೋಜನೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಕಂದಾಯ ನಿರೀಕ್ಷಕ ವಿಜಯ್ ಆರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷುಕುಮಾರ್, ತಾಲೂಕು ಸವಿತಾ ಸಮಾಜದ ಪದಾಧಿಕಾರಿ ಹರೀಶ್ ಸಾಲ್ಯಾನ್ ಕೈಕಂಬ, ಸವಿತಾ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಭುಜಂಗ ಸಾಲಿಯಾನ್, ಮೋಹನ್ ಭಂಡಾರಿ ಪೊಯಿತಾಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶನ್ ಸರಪಾಡಿ, ಸಿಬಂದಿ ಹರ್ಷ, ಗ್ರಾಮ ಆಡಳಿತ ಅಧಿಕಾರಿಗಳು, ತಾಲೂಕು ಕಚೇರಿ ಸಿಬಂದಿ, ಗ್ರಾಹಸಹಾಯಕರು ಉಪಸ್ಥಿತರಿದ್ದರು. ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಸೀತಾರಾಮ ಕಮ್ಮಾಜೆ ಸ್ವಾಗತಿಸಿ, ವಂದಿಸಿದರು