ಬಂಟ್ವಾಳ: ಗಡಿಗ್ರಾಮದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಮಾಣಿಲದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕರು, ಇಲಾಖೆಗಳಿಗೆ ಗ್ರಾಮದ ಸಂಪರ್ಕ ಕಲ್ಪಿಸಲು ಇದು ಕಾರಣವಾಗಿದೆ ಎಂದರು.
ಅಧಿಕಾರಿ, ಜನಪ್ರತಿನಿಧಿ ಗ್ರಾಮದೆಡೆ ತೆರಳಿದಾಗ ಸಮಸ್ಯೆಗೆ ಪರಿಹಾರ ದೊರಕುವ ಕೆಲಸ ಆಗುತ್ತದೆ. ದ.ಕ.ಜಿಲ್ಲೆಯ ಗಡಿಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಕಂದಾಯ ಇಲಾಖೆ ಸಮಸ್ಯೆ ನೂರಕ್ಕೆ ನೂರು ಪರಿಹಾರವನ್ನು ಕಂಡರೆ, ಜನಪ್ರತಿನಿಧಿಗಳೂ ನಿರಾಳರಾಗುತ್ತಾರೆ. ಮರಳು, ಕೆಂಪುಕಲ್ಲು, ಪ್ರಮಾಣಪತ್ರಗಳು, ಹೀಗೆ ಸಮಸ್ಯೆಗಳು ಹಲವು ಎಂದರು. ಭ್ರಷ್ಟಾಚಾರಮುಕ್ತ ವ್ಯವಸ್ಥೆ ಆಗಬೇಕು, ಹೋದ ತಕ್ಷಣ ಕೆಲಸ ಆಗುವ ಕಾರ್ಯ ಆಗಬೇಕು ಎಂದರು. ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಜನರಿಗೆ ಹತ್ತಿರವಾದಷ್ಟು ಸಮಸ್ಯೆ ಪರಿಹಾರ ದೊರಕುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್, ಎಲ್ಲ ಕಾರ್ಯಗಳಿಗೆ ತಾಲೂಕು ಮಟ್ಟದ ಹಾಗೂ ಅನುಮೋದನೆ ದೊರಕದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಪರಿಣಾಮಕಾರಿಯಾಗಿ ಮೂಡಿಬರುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ, ಹಲವು ಬೇಡಿಕೆಗಳ ಪಟ್ಟಿಯನ್ನು ಮಂಡಿಸಿದರು.
ಮಾಣಿಲ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಯೋಜನಾ ನಿರ್ದೇಶಕ ಕೆ.ಜಯರಾಮ್, ಡಿಡಿಎಲ್ ಆರ್ ನಿರಂಜನ್, ತಹಸೀಲ್ದಾರ್ ದಯಾನಂದ್ ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು. ಉಮಾನಾಥ ರೈ ಮೇರಾವು, ಅನಿಲ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಯಿತು. ನವೀನ್ ಬೆಂಜನಪದವು ವಂದಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಿಂದ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ಪಂಚಾಯತಿ ನಿವೇಶನ, ಆರೋಗ್ಯ ಕೇಂದ್ರ, ಅಂಬೇಡ್ಕರ್ ಭವನ, ಹಾಳೆತಟ್ಟೆ ಫ್ಯಾಕ್ಟರಿ ಮಾಡುವುದಿದ್ದರೆ ಸಹಾಯಧನ, ಪಶು ಚಿಕಿತ್ಸಾಲಯ, ವಾಲ್ಮೀಕಿ ಭವನ, ಸಬ್ ಸ್ಟೇಶನ್ ಬೇಡಿಕೆ ಮಂಜೂರಾಯಿತು.