ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.27 ರ ವರೆಗೆ ನಡೆಯುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಕಾರ್ಯಕ್ರಮದ ಐದನೇ ದಿನದ ಸಮಾರೋಪ ಕಲ್ಲಡ್ಕ ಶ್ರೀರಾಮಮಂದಿರದಲ್ಲಿ ಬುಧವಾರ ರಾತ್ರಿ ಸಭಾಕಾರ್ಯಕ್ರಮ ನಡೆಯಿತು. ರಾಜ್ಯ ಸರಕಾರದ ಮೂವರು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಸಕರ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮಾತನಾಡಿ, ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮುಕ್ತಗೊಳಿಸಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಶಾಸಕ ರಾಜೇಶ್ ನಾಯ್ಕ್ ತನ್ನ ಅಭಿವೃದ್ಧಿಪರ ಕೆಲಸಗಳ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ನೆಮ್ಮದಿಯನ್ನು ಸ್ಥಾಪಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.ಬಿಜೆಪಿ ಬಂದ ಬಳಿಕ ಕರ್ನಾಟಕದಲ್ಲಿ ಪ್ರತಿಭೆ ಆಧಾರಿತವಾಗಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ ಎಂದ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ಭಾರತವಿಂದು ಹಲವು ಸಶಕ್ತ ಕಾರ್ಯಯೋಜನೆಯನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಹಲವರು ಪಕ್ಷ ಕಟ್ಟಿದ ಹಿನ್ನೆಲೆಯಲ್ಲಿ ಪಕ್ಷ ಇಂದು ಗಟ್ಡಿಯಾಗಿದ್ದು, ಬಿಜೆಪಿಯ ಸಾಧನೆಗಳನ್ನು ತಿಳಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕಿದೆ. ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸಿದ ವೈಖರಿಯಿಂದಾಗಿ ಭಾರತ ಇಂದು ಜಗತ್ತು ನೋಡುವಂತಾಗಿದೆ ಎಂದರು.
ಮೀನುಗಾರಿಕಾ ಸಚಿವ ಎಸ್.ಅಂಗಾರ ಮಾತನಾಡಿ, ಉತ್ತಮ ಕೆಲಸಗಳನ್ನು ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯಂತೆ ಜನತೆಯ ಆಶೀರ್ವಾದದಿಂದ ವಿಜಯಿಯಾಗಿ ಜನಪರ ಕೆಲಸ ಮಾಡಿದ ತೃಪ್ತಿ ಇದೆ ಎಂದರು.ಪ್ರಾರಂಭದ ಚುನಾವಣೆಯಲ್ಲಿ ಸೋತರೂ ಮತ ನೀಡಿದ ೬೫ ಸಾವಿರ ಮಂದಿಗೆ ಕೃತಜ್ಞತೆ ಹೇಳಲು ಪ್ರಾರಂಭದ ಪಾದಯಾತ್ರೆ ನಡೆಸಿದ್ದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ ಮತ್ತು ಪದ್ಮನಾಭ ಕೊಟ್ಟಾರಿ, ರಾಜ್ಯ ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ ಶೆಟ್ಟಿ, ಗ್ರಾಮವಿಕಾಸ ಯಾತ್ರೆ ಸಂಚಾಲಕ ಬಿ.ದೇವದಾಸ್ ಶೆಟ್ಟಿ, ಸಹಸಂಚಾಲಕರಾದ ಮಾಧವ ಮಾವೆ, ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರಾದ ಮೋಹನ ಪಿ.ಎಸ್, ಯಶೋಧರ ಕರ್ಬೆಟ್ಟು, ಗೋಳ್ತಮಜಲು ಪಂಚಾಯಿತಿ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಬಾಳ್ತಿಲ ಗ್ರಾಪಂ ಅಧ್ಯಕ್ಷೆ ಹಿರಣ್ಮಯಿ, ಬರಿಮಾರು ಗ್ರಾಪಂ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ನಿರ್ವಹಿಸಿದರು.