ಬಂಟ್ವಾಳ ಪುರಸಭೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನಿಗದಿಪಡಿಸಲಾಗಿದ್ದು, ಒಟ್ಟಾರೆಯಾಗಿ ತನ್ನ ಶಾಸಕತ್ವದ ಅವಧಿಯಲ್ಲಿ 300 ಕೋಟಿ ರೂ ವೆಚ್ಚದ ಕಾಮಗಾರಿಗಳ ಪ್ರಗತಿ, ಚಾಲನೆಯ ಹಂತದಲ್ಲಿವೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ನೂತನವಾಗಿ ನಿರ್ಮಾಣವಾದ ಅಭಿಲೇಖಾಲಯ ಕಚೇರಿ ಕಟ್ಟಡವನ್ನು ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
135 ಕೋಟಿ ರೂ ವೆಚ್ಚದ ಜಕ್ರಿಬೆಟ್ಟವಿನ ಸೇತುವೆ ಮತ್ತು ಬ್ಯಾರೇಜ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಇದು ಪುರಸಭೆಗೆ ನೀರಿನ ಸಮಸ್ಯೆಯನ್ನು ನೀಗಿಸಲಿದೆ, ಬಂಟ್ವಾಳ ಪುರಸಭೆಯ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎರಡನೇ ಹಂತದ 40.16 ಕೋಟಿ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. 50 ಕೋಟಿ ರೂ ವೆಚ್ಚದ ಯುಜಿಡಿ ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದರು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರಿಗೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಿದ್ದೇನೆ ಎಂದರು.
ಈ ಸಂದರ್ಭ ಶಾಸಕರು ಪುರಸಭಾ ಸದಸ್ಯರೊಂದಿಗೆ ಮಾತುಕತೆ ನಡೆಸಿದ ವೇಳೆ ಲೊರೆಟ್ಟೊ ಪೊನ್ನಂಗಿಲ ರಸ್ತೆ ಅಭಿವೃದ್ಧಿ ಕುರಿತು ಸದಸ್ಯ ಬಿ.ವಾಸು ಪೂಜಾರಿ ಗಮನ ಸೆಳೆದರೆ, ಜಕ್ರಿಬೆಟ್ಟು ಅಣೆಕಟ್ಟಿನ ಕುರಿತು ಸದಸ್ಯ ಜನಾರ್ದನ ಚಂಡ್ತಿಮಾರ್ ಮಾತನಾಡಿದರು. ಪಿ.ರಾಮಕೃಷ್ಣ ಆಳ್ವ, ಸಿದ್ಧೀಕ್ ಗುಡ್ಡೆಯಂಗಡಿ ಸಹಿತ ವಿವಿಧ ಸದಸ್ಯರು ಮಾತುಕತೆ ನಡೆಸಿದರು.
ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ, ಪುರಸಭಾ ಜನಪ್ರತಿನಿಧಿಗಳ ವಾರ್ಡ್ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಅನುದಾನ ನೀಡುವಂತೆ ಸದಸ್ಯರ ಪರವಾಗಿ ಬೇಡಿಕೆ ಮಂಡಿಸಿ, ತನ್ನ ಅವಧಿಯಲ್ಲಾದ ಪ್ರಗತಿಯ ಕುರಿತು ವಿವರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪುರಸಭಾ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.