ಕವರ್ ಸ್ಟೋರಿ

ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಯಿತು ದ.ಕ.ಜಿಲ್ಲೆಯ ಕಡೇಶಿವಾಲಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಯ ‘ಕೃಷಿ ಮಾಡೆಲ್’

ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ತೀರಾ ಗ್ರಾಮೀಣ ಭಾಗವಾದ ಕಡೇಶಿವಾಲಯದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಯಶವಂತ ಎಂಬ ವಿದ್ಯಾರ್ಥಿ ತಯಾರಿಸಿದ ಮಾಡೆಲ್ ಒಂದು ಇದೀಗ ರಾಜ್ಯಮಟ್ಟದಿಂದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿ ಗಮನ ಸೆಳೆದಿದೆ.

ಜಾಹೀರಾತು

ಸರಕಾರಿ ಶಾಲೆಯ ವಿದ್ಯಾರ್ಥಿಯ ಈ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ಆತನ ಬಹು ಉಪಯೋಗಿ ಕೃಷಿ ಯಂತ್ರದ ಅನ್ವೇಷಣೆಯು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡದ ರಾಯಪುರದಲ್ಲಿ ನಡೆಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಮಾನ ಪಡೆದು ಕೇರಳದ ತ್ರಿಶೂರ್‌ನಲ್ಲಿ ಜ. 27ರಿಂದ 31ರವರೆಗೆ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ರಾಜ್ಯದಿಂದ ದಕ್ಷಿಣ ಭಾರತ ಮಟ್ಟಕ್ಕೆ ಒಟ್ಟು 20 ಮಾದರಿಗಳು ಆಯ್ಕೆಯಾಗಿದ್ದು, ವೈಯಕ್ತಿಕ ವಿಭಾಗದಲ್ಲಿ ದ.ಕ.ಜಿಲ್ಲೆಯಿಂದ ಈ ವಿದ್ಯಾರ್ಥಿಯ ಮಾದರಿ ಮಾತ್ರ ಆಯ್ಕೆಯಾಗಿದೆ. ಕಡೇಶ್ವಾಲ್ಯ ಕೆಮ್ಮಾನು ನಿವಾಸಿ ಲೋಕೇಶ- ಪವಿತ್ರ ದಂಪತಿಯ ಪುತ್ರನಾಗಿರುವ ಯಶವಂತನಿಗೆ ಶಾಲೆಯ ಗಣಿತ ಶಿಕ್ಷಕಿ ಗೀತಾಕುಮಾರಿ ಮಾರ್ಗದರ್ಶನ ನೀಡಿದ್ದರು. ಈ ವಿದ್ಯಾರ್ಥಿಯ ಮಾದರಿಯು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ, ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.

ನಾನು ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆ ಆಗಿದ್ದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ನಮ್ಮ ಶಾಲಾ ಶಿಕ್ಷಕರಿಗೆ, ಅಪ್ಪ, ಅಮ್ಮನಿಗೆ ಈ ಸಾಧನೆ ಖುಷಿ ಕೊಟ್ಟಿದೆ. ಧಾರವಾಡದಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತುಂಬಾ ವಿಷಯಗಳನ್ನು ಕಲಿತಿದ್ದೇನೆ ಎಂದು ಯಶವಂತ ಹೇಳಿದ್ದಾನೆ.

ನನ್ನ ಈ ಯಂತ್ರವು ಬಹೂಪಯೋಗಿ ಕೃಷಿ ಯಂತ್ರವಾಗಿದೆ. ಹಾವು ಬರದ ಹಾಗೆ ವ್ಯವಸ್ಥೆಯೂ ಇದೆ. ಸೈಕಲ್ ಜೋಡಣೆ ಮಾಡಿ ಎಲ್ಲೂ ತೆಗೆದುಕೊಂಡು ಹೋಗಬಹುದು. ಇಳಿಜಾರು ಪ್ರದೇಶದಲ್ಲಿ ಹೊಲ ಇದ್ದರೆ, ರೈತರಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಯಂತ್ರದಲ್ಲಿ ಅಳವಡಿಸಲಾದ ಮೋಟರ್ ನಿಂದ ಸುಲಭವಾಗುತ್ತದೆ. ಬಹೂಪಯೋಗಿ ಕೃಷಿ ಯಂತ್ರದಲ್ಲಿ ಉಳುಮೆ ಮಾಡಲು ವ್ಯವಸ್ಥೆ, ಫಸಲು ಕಟಾವು ವ್ಯವಸ್ಥೆಯೂ ಇದೆ ಎಂದು ತನ್ನ ಯಂತ್ರದ ಕುರಿತು ಯಶವಂತ ವರ್ಣಿಸಿದ್ದಾನೆ.

ಸರಕಾರಿ ಪ್ರೌಢಶಾಲೆ ಕಡೇಶಿವಾಲಯದ ಗಣಿತ ಶಿಕ್ಷಕಿ ಗೀತಾ ಕುಮಾರಿ ಅವರು ಮಾರ್ಗದರ್ಶಿ ಶಿಕ್ಷಕಿ. ದಕ್ಷಿಣ ಭಾರತದ ಝೋನಲ್ ಲೆವೆಲ್ ಗೆ ಯಶವಂತ ಆಯ್ಕೆಯಾಗಿರುವುದು ಸಂತಸ ತಂದಿದೆ. ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಮಾಡೆಲ್ ತಯಾರಿ ಕುರಿತು ವಿದ್ಯಾರ್ಥಿಗಳಿಗೆ ನಾನು ಹೇಳಿದಾಗ, ಯಶವಂತ ಈ ಮಾಡೆಲ್ ಮಾಡಿದ್ದೇನೆ ಎಂದು ಹೇಳಿದ. ಕೃಷಿಕರ ಮನೆಯ ಸದಸ್ಯರೇ ಕೃಷಿ ಕೆಲಸವನ್ನು ಮಾಡಿಕೊಂಡು ಮುನ್ನಡೆಯಲು ಸಹಕಾರಿಯಾಗಲು ಬಹೂಪಯೋಗಿ ಕೃಷಿ ಯಂತ್ರವನ್ನು ಯಶವಂತ ತಯಾರಿ ಮಾಡಿದ್ದಾನೆ. ಈ ಯಂತ್ರದಲ್ಲಿ 20ಕ್ಕಿಂತಲೂ ಹೆಚ್ಚು ಉಪಯೋಗಗಳಿವೆ. ಈಗಾಗಲೇ ಕೃಷಿ ಕೆಲಸ ಮಾಡಲು ಯಂತ್ರಗಳು ಚಾಲ್ತಿಯಲ್ಲಿದ್ದರೂ ಒಂದೊಂದು ಯಂತ್ರ ಒಂದೊಂದು ಕೆಲಸ ಮಾಡುತ್ತವೆ. ಆದರೆ, ಯಶವಂತನ ಈ ಯಂತ್ರವೊಂದರಲ್ಲೇ ಎಲ್ಲ ಕೆಲಸಗಳು ಆಗುತ್ತವೆ.

ಯಶವಂತನ ಮಾದರಿ ತಯಾರಿಗೆ ತಂದೆ, ತಾಯಿ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ. ನನ್ನ ಸೇವಾವಧಿಯಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಕರೆದುಕೊಂಡು ಹೋಗಿರುವುದು ಇದೇ ಪ್ರಥಮ. ಅಲ್ಲಿ ಆಯ್ಕೆಯಾದ 20 ಮಾದರಿಗಳಲ್ಲಿ ಯಶವಂತನ ಮಾಡೆಲ್ ಆಯ್ಕೆಯಾದದ್ದು ಬಹಳಷ್ಟು ಸಂತೋಷ ತಂದಿದೆ. ಎಂದವರು ಹೇಳಿದರು.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.