ಬಂಟ್ವಾಳ: ಓರ್ವ ಸಾಧಕನಿಗೆ ಹುಟ್ಟೂರ ಅಭಿನಂದನೆಯು ಪ್ರೀತಿ ಹಂಚುವ ಕಾರ್ಯವಾಗಿದ್ದು, ರಾಜ್ಯೋತ್ಸವ ಪುರಸ್ಕೃತ ಅಶೋಕ ಶೆಟ್ಟಿಯವರಿಗೆ ಅಂತಹ ಪ್ರೀತಿ ಲಭಿಸಿದೆ. ಊರಿನ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸರ್ವರೂ ಜತೆಯಾಗಿ ಕೆಲಸ ಮಾಡಬೇಕಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವತಿಯಿಂದ ಸರಪಾಡಿಯ ನಾಗರಿಕರಿಂದ ಮಂಗಳವಾರ ಸರಪಾಡಿ ದೇವಸ್ಥಾನದ ವಠಾರದಲ್ಲಿ ನಡೆದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿ ಅಶೋಕ ಶೆಟ್ಟಿಯವರು ಸರ್ವ ಕ್ಷೇತ್ರದಲ್ಲೂ ಕೈಯಾಡಿಸಿ ಧರ್ಮಪ್ರಜ್ಞೆ ಮೂಡಿಸಿದ ಫಲವಾಗಿ ಈ ಪ್ರಶಸ್ತಿ ಒಲಿದುಬಂದಿದೆ. ದಾನಧರ್ಮಕ್ಕೆ ಸೇಸಪ್ಪ ಕೋಟ್ಯಾನ್ ಆದರ್ಶರಾಗಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಊರಿನ ನಾಗರಿಕರ ಆಶೀರ್ವಾದದ ರೂಪದಲ್ಲಿ ಅಶೋಕ ಶೆಟ್ಟಿಯವರಿಗೆ ಸಮ್ಮಾನ ಲಭಿಸಿದ್ದು, ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿ ಬಂದಿರುವುದು ಹೆಮ್ಮೆ ಪಡುವ ವಿಚಾರ. ಸರಪಾಡಿ ದೇವಸ್ಥಾನ ಹಾಗೂ ಊರಿನ ಅಭಿವೃದ್ಧಿ ವಿಶೇಷ ಗಮನ ಹರಿಸಲಾಗಿದ್ದು, ಕೋಟ್ಯಾಂತರ ರೂಪಾಯಿಗಳ ಅನುದಾನ ಒದಗಿಸಲಾಗಿದೆ ಎಂದರು.
ಅಭಿನಂದನೆಗೆ ಕೃತಜ್ಞತೆ ಅರ್ಪಿಸಿದ ಅಶೋಕ ಶೆಟ್ಟಿಯವರು, ಹುಟ್ಟೂರ ಅಭಿನಂದನೆಯು ರಾಜ್ಯೋತ್ಸವ ಪ್ರಶಸ್ತಿಗಿಂತಲೂ ದೊಡ್ಡ ಗೌರವವಾಗಿದೆ ಎಂದರು. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೇಸಪ್ಪ ಕೋಟ್ಯಾನ್ ಹಾಗೂ ವೆಂಕಪ್ಪ ನಲಿಕೆ ಅವರನ್ನು ಅಭಿನಂದಿಸಲಾಯಿತು.
ಸರಪಾಡಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆಗೈದರು. ಯಕ್ಷಗಾನ ಸಂಘಟಕ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಯಕ್ಷಧೃವ ಪಟ್ಲ ಫೌಂಡೇಶನ್ ಸಂಸ್ಥಾಪಕ, ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಕಟ್ಟೆಮನೆ ಉದಯಕುಮಾರ್ ಅಜಿಲ ಉಪಸ್ಥಿತರಿದ್ದರು.
ಶಿಕ್ಷಕ ಉದಯಕುಮಾರ್ ಬಿ. ಹಾಗೂ ದಂತ ವೈದ್ಯ ಡಾ.ಬಾಲಚಂದ್ರ ಶೆಟ್ಟಿ ಮೀಯಾರು ಸಮ್ಮಾನ ಪತ್ರ ವಾಚಿಸಿದರು.
ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ರಾಧಾಕೃಷ ರೈ ಕೊಟ್ಟುಂಜ ಸ್ವಾಗತಿಸಿ, ವಿಠಲ್ ಎಂ.ಆರುಮುಡಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು