ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಹಕಾರದೊಂದಿಗೆ ಮಂಗಳೂರಿನಿಂದ ಬೆಂಗಳೂರಿಗೆ ಜನವರಿ 6ರಿಂದ 11ರವರೆಗೆ ಭಾವೈಕ್ಯತಾ ಜಾಥ ನಡೆಯಲಿದೆ. ಈ ವಿಚಾರವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ರೈತ, ಕಾರ್ಮಿಕ, ದಲಿತ ಮುಖಂಡರು ಮಾಹಿತಿ ನೀಡಿದರು. ಪ್ರಮುಖರಾದ ಪ್ರೇಮನಾಥ ಶೆಟ್ಟಿ ಬಾಳ್ತಿಲ, ರಾಮಣ್ಣ ವಿಟ್ಲ, ಸೇಸಪ್ಪ ಬೆದ್ರಕಾಡು ಮತ್ತು ಸದಾನಂದ ಶೀತಲ್ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯ ವಿವರ ಇಲ್ಲಿದೆ.
ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಭಾವೈಕ್ಯತಾ ಜಾಥ ಮಂಗಳೂರಿನಿಂದ ಬೆಂಗಳೂರಿನವರೆಗೆ ಜನವರಿ 6ರಿಂದ 11ರವರೆಗೆ ನಡೆಯಲಿದ್ದು, ಮಂಗಳೂರು ಬಾವುಟಗುಡ್ಡೆಯಲ್ಲಿ ಜ.6ರಂದು ಬೆಳಗ್ಗೆ 10 ಗಂಟೆಗೆ ರೈತ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿಯ ಬಳಿ ಉದ್ಘಾಟನೆ ನಡೆಯಲಿದೆ. 7ರಂದು ಬಿ.ಸಿ.ರೋಡ್ ಗೆ ಆಗಮಿಸಲಿದೆ ಎಂದು ರಾಜ್ಯ ರೈತ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜ.11ರಂದು ಜಾಥಾಗಳ ಸಮಾಗಮ ನಡೆಯಲಿದ್ದು, ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಸಮಾವೇಶ ನಡೆಯುವುದು. ರೈತ ಕೂಲಿಕಾರ ಕೇಂದ್ರಿತ ಪ್ರಧಾನ ಜಾಥಾ ಕೂಡಲಸಂಗಮದಿಂದ, ಭಾವೈಕ್ಯತಾ ಜಾಥ ಮಂಗಳೂರಿನಿಂದ, ಸಾಮೂಹಿಕ ಭೂಮಿ ಸಂರಕ್ಷಣಾ ಕೇಂದ್ರಿತ ಜಾಥಾ ಕುಸನೂರಿನಿಂದ ಹಾಗೂ ಸಂವಿಧಾನ ರಕ್ಷಣೆ ಕೇಂದ್ರಿತ ಜಾಥಾ ಕೋಲಾರದಿಂದ ಆರಂಭಗೊಳ್ಳಲಿದ್ದು, ಅವು ಬೆಂಗಳೂರಿನಲ್ಲಿ ಸಮಾಗಮ ಹೊಂದಲಿದೆ ಎಂದರು.
ಇದೇ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿರುವ ಅಡಕೆ ಬೆಳೆ ಕುರಿತ ಹೇಳಿಕೆಯನ್ನು ಖಂಡಿಸಿದ ಶೆಟ್ಟಿ, ಇದರ ಬದಲು ಭೂತಾನ್ ನಿಂದ ಆಮದು ನಿಲ್ಲಿಸಲಿ ಎಂದು ಒತ್ತಾಯಿಸಿದರು. ವಿವಿಧ ಮುಖಂಡರಾದ ರಾಮಣ್ಣ ವಿಟ್ಲ, ಬಿ.ಕೆ.ಸೇಸಪ್ಪ ಬೆದ್ರಕಾಡು, ಸದಾನಂದ ಶೀತಲ್ ಉಪಸ್ಥಿತರಿದ್ದರು.