ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಮಂಚಿ ಕುಕ್ಕಾಜೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಮೂರು ದಿನಗಳ ಕಾಲ ಸಂಸ್ಕೃತಿ ಉತ್ಸವ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ: ಚೆಂಡೆ ಬಾರಿಸುವ ಮೂಲಕ ಮಹದೇವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅನಂತಯ್ಯ ವಿ.ರಾವ್, ಪತ್ತುಮುಡಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ಪುಷ್ಪರಾಜ ಕುಕ್ಕಾಜೆ ಮತ್ತು ಪ್ರಸಾಧನ ಕಲಾವಿದ ಶಿವ ಶಂಕರ ರಾವ್ ಅವರನ್ನು ಸನ್ಮಾನಿಸಲಾಯಿತು. ಸಭಾಧ್ಯಕ್ಷತೆಯನ್ನು ಮಂಚಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಪುಷ್ಪಾ ಕಾಮತ್ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿ, ಉಮಾನಾಥ ರೈ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತಿ ಉತ್ಸವದ ಅಂಗವಾಗಿ, ಮೋಹನ್ ರಾವ್ ಮತ್ತು ಬಳಗದವರಿಂದ ’ಸೀತಾ ಪರಿತ್ಯಾಗ’ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಜರಗಿತು.
ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ’ತುಳುನಾಡಿನ ಭೌತಿಕ ಸಂಸ್ಕೃತಿ’ ಎನ್ನುವ ವಿಷಯವಾಗಿ, ದಿ.ಡಾ.ಕಜೆಮಹಾಬಲ ಭಟ್ಟರ ಸ್ಮರಣಾರ್ಥ, ವಿಶೇಷ ಉಪನ್ಯಾಸವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ನೀಡಿದರು. ನಮ್ಮ ಹಿರಿಯರು ಅನಕ್ಷರಸ್ಥರು, ಅವರ ಮೌಖಿಕ ಜ್ಞಾನದಿಂದ, ಅವರವರು ಆಯಾಯ ಕಾಲದಲ್ಲಿ ಏನೆಲ್ಲಾ ಭೌತಿಕ ವಸ್ತುಗಳನ್ನು ಬಳಕೆ ಮಾಡಿಕೊಂಡು ಬಂದಿದ್ದರೋ, ಅವುಗಳನ್ನೆಲ್ಲ ಗಮನಿಸಿದರೆ, ಅವುಗಳು ಅದ್ಭುತವಾದ ಚರಿತ್ರೆಯನ್ನೇ ಹೇಳುತ್ತವೆ. ನಮ್ಮ ಆಚರಣೆಗಳೆಲ್ಲ ನೇರವಾಗಿ ಕೃಷಿ ಸಂಬಂಧಿಯಾಗಿರುವುದು ಸಹ ಆಯಾ ಕಾಲದಲ್ಲಿ ಬಳಕೆಯಾಠದ ಭೌತಿಕ ವಸ್ತುಗಳು ಅಂದಿನ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರು.ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡಿನ ಹಿರಿಯ ವಕೀಲ ಅಜಿತ್ ಕುಮಾರ ರಾವ್ ಭಾಗವಹಿಸಿದ್ದರು. ಮಕ್ಕಳ ನಾಟಕ ವಿನ್ಯಾಸಕಾರರಾದ ಮೂರ್ತಿ ದೇರಾಜೆ ಅಧ್ಯಕ್ಷತೆ ವಹಿಸಿ, ಡಾ. ಮಹಾಬಲ ಭಟ್ಟರ ನೆನಪನ್ನು ಮಾಡಿಕೊಂಡರು.
ಇದೇ ಸಂದರ್ಭದಲ್ಲಿ, ಡಾ.ಚಕ್ರಪಾಣಿ, ಮತ್ತು ಬಳಗದವರಿಂದ ಕೊಳಲುವಾದನ ಕಛೇರಿ ನಡೆಯಿತು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ಟರು ಸ್ವಾಗತಿಸಿ, ರಮಾನಂದ ನೂಜಿಪ್ಪಾಡಿ ವಂದಿಸಿದರು. ಉಮಾನಾಥ ರೈ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ನೂಜಿಬೈಲು ನಾರಾಯಣ ಭಟ್, ಬಿ.ವಿ.ಕಾರಂತರು ರಂಗಭೂಮಿಯ ಮೂಲಕ ನೀಡಿದ ಸಂಸ್ಕೃತಿ ಅದು ಸಾರ್ವಕಾಲಿಕವಾದುದು ಎಂದರು. ಮುಖ್ಯ ಅತಿಥಿಗಳಾಗಿ ಲಯನ್ ಮಾಜಿ ರಾಜ್ಯಪಾಲ ದೇವದಾಸ ಭಂಡಾರಿ ಮತ್ತು ಪತ್ರಕರ್ತ ಹರೀಶ್ ಮಾಂಬಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ಇದೇ ಸಂದರ್ಭದಲ್ಲಿ, ಹರಿಕಥಾ ಕೀರ್ತನಕಾರರಾದ, ಮಂಜುಳಾ ಗುರುರಾಜ ರಾವ್ ರವರನ್ನು ಸನ್ಮಾನಿಸಲಾಯಿತು. ಗಣೇಶ ಐತಾಳರು ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ’ನಂದಗೋಕುಲ ಟ್ರಸ್ಟ್’ , ಮಂಗಳೂರು ಇವರು ಪ್ರಸ್ತುತಿ ಪಡಿಸಿದ, ಶ್ವೇತಾ ಅರೆಹೊಳೆ ಇವರಿಂದ ಏಕ ವ್ಯಕ್ತಿ ನಾಟಕ ಪ್ರದರ್ಶನ ’ಗೆಲ್ಲಿಸ ಬೇಕು ಅವಳ’ ಪ್ರದರ್ಶನ ಗೊಂಡಿತು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ಟರು ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ವಂದಿಸಿದರು. ಶಾರದಾ ಎಸ್.ರಾವ್ ಮತ್ತು ಶೈಲಜ ಕಾರ್ಯಕ್ರಮ ನಿರೂಪಿಸಿದರು.