ಅಪಘಾತ, ತುರ್ತು ಪರಿಸ್ಥಿತಿ ಸಂದರ್ಭ ಕೈಗೊಳ್ಳಬೇಕಾದ ತುರ್ತು ಪರಿಹಾರೋಪಾಯಗಳ ಕುರಿತು ಮಾಹಿತಿ ನೀಡಿದ ಹಳೆ ವಿದ್ಯಾರ್ಥಿ ಜಗದೀಶ ಅಡಪ
ಮುಡಿಪು: ಮುಡಿಪು ಶ್ರೀ ಭಾರತಿ ಶಾಲೆ ವಿದ್ಯಾರ್ಥಿಗಳ ಸಂಘ ಮುಡಿಪು ಆಶ್ರಯದಲ್ಲಿ ಡಿ.18ರಂದು ಅಪರಾಹ್ನ ಹಳೆ ವಿದ್ಯಾರ್ಥಿಗಳ ಕುಟುಂಬದವರು ಹಾಗೂ ಸಾರ್ವಜನಿಕರಿಗಾಗಿ “ಸುರಕ್ಷತೆಯ ಪಾಲನೆ, ಜೀವನದ ಲಾಲನೆ”ಕೌಟುಂಬಿಕ ಸುರಕ್ಷತೆಯ ಕುರಿತ ಜೀವ ರಕ್ಷಣಾ ಕೌಶಲ್ಯ ಕಾರ್ಯಾಗಾರ ನಡೆಯಿತು. ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ,ಜೀವ ರಕ್ಷಣಾ ಕೌಶಲ್ಯ ತಜ್ಞ ಚೆನ್ನೈಯ ಜಗದೀಶ ಅಡಪ ಸುಮಾರು 4 ಗಂಟೆಗಳ ಕಾಲ ಕಾರ್ಯಾಗಾರವನ್ನು ಉಚಿತವಾಗಿ ನಡೆಸಿಕೊಟ್ಟರು.
ಬೆಂಕಿ ಅವಘಡ, ಅಡುಗೆ ಅನಿಲ ಸೋರಿಕೆ, ಅಡುಗೆ ಕೋಣೆಯಲ್ಲಿನ ಅಗ್ನಿ ಆಕಸ್ಮಿಕಗಳು, ಅಪಘಾತ ಸಂಭವಿಸಿದಾಗ ಗಾಯಾಳುಗಳ ರಕ್ಷಣೆ, ತಲೆಗೆ ಏಟಾದಾಗ ಬ್ಯಾಂಡೇಜ್ ಬಿಗಿಯುವ ವಿಧಾನ, ಕೈ ಮುರಿಯುವಿಕೆ ಆದಾಗ ಕೈಯ್ಯನ್ನು ತಕ್ಷಣ ರಕ್ಷಿಸುವ ಪ್ರಥಮ ಚಿಕಿತ್ಸೆ, ಶ್ವಾಸೋಚ್ಛಾಸ ವ್ಯತ್ಯಾಸ, ಹೃದಾಯಾಘಾತಗಳ ಸಂದರ್ಭ ನಾವೇ ಮಾಡಬಹುದಾದ ಸುಲಭ ಪ್ರಥಮ ಚಿಕಿತ್ಸೆಗಳು ಇತ್ಯಾದಿಗಳ ಕುರಿತು ಉದಾಹರಣೆ ಹಾಗೂ ಪ್ರಾತ್ಯಕ್ಷಿಕೆ ಸಹಿತ ಅಡಪ ಅವರು ತರಬೇತಿ ನೀಡಿದರು.
ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಾಲೆಯ ಹಿರಿಯ ನಿವೃತ್ತ ಶಿಕ್ಷಕಿ ಶಶಿಕಲಾ ಟೀಚರ್, ಹಿರಿಯರಾದ ಲಕ್ಷ್ಮೀ ಜೆ.ಶೆಟ್ಟಿ, ಕೊಣಾಜೆ ಶಂಕರ್ ಭಟ್ ಅವರು ದೀಪ ಪ್ರಜ್ವಲನೆ ಮೂಲಕ ಶಿಬಿರ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿಗಳ ಸಂಘದ ಗೌರವ ಸಲಹೆಗಾರ ಕೆ.ಶಂಕರನಾರಾಯಣ ಭಟ್, ಶ್ರೀ ಭಾರತಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಮುರಳಿಮೋಹನ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಸಂಸ್ಥೆಯ ಸಂಚಾಲಕ ಕೆ.ಎಸ್.ಭಟ್, ಮುಖ್ಯೋಪಾಧ್ಯಾಯಿನಿ ಶಕುಂತಳಾ ಶೆಟ್ಟಿ, ಹಿರಿಯ ಶಿಕ್ಷಕ ರಾಮ ಕಲ್ಲೂರಾಯ ಮತ್ತಿತರರು ಹಾಜರಿದ್ದರು.
ಕಾರ್ಯಾಗಾರದ ವೆಚ್ಚ ಭರಿಸಿ, ಉಚಿತವಾಗಿ ಪ್ರಾತ್ಯಕ್ಷಿಕೆ ನೀಡಿದ ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ಜಗದೀಶ ಅಡಪ ಹಾಗೂ ಅವರ ಸಹೋದರ ಜಯಶೀಲ ಅಡಪ ಅವರನ್ನು ಸಂಸ್ಥೆ ವತಿಯಿಂದ ಶಾಲು ಹೊದೆಸಿ, ಗಿಡ ನೀಡಿ ಗೌರವಿಸಲಾಯಿತು. ಈ ಸಂದರ್ಭ ತಾವು ಕಲಿತ ಶಾಲೆಗೆ ಮಾನವನ ಶ್ವಾಸೋಚ್ಛಾಸ ಸುಲಲಿತಗೊಳಿಸುವ ಪ್ರಾತ್ಯಕ್ಷಿಕೆ ನೀಡುವ ಮಾನವ ದೇಹದ ಪ್ರೃತಿಕೃತಿ ಪರಿಕರವನ್ನು ಕೊಡುಗೆಯಾಗಿ ಜಗದೀಶ ಅಡಪ ನೀಡಿದರು.
ಭಾರತಿ ಶಾಲೆಯ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಸ್ವಾಗತಿಸಿ, ವಂದಿಸಿದರು. ಭಾರತಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಾದ ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮೊಹಮ್ಮದ್ ಅಸ್ಗರ್, ಡಾ.ಅರುಣ್ ಪ್ರಸಾದ್, ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ನರಸಿಂಹ ಭಟ್, ಶಿಕ್ಷಕ ರಾಮಕೃಷ್ಣ ಭಟ್ ಲಾಡ, ಮನು ಕೊಡಕ್ಕಲ್ಲು, ಸಂಶುದ್ದೀನ್ ಸಹಿತ ಹಲವರು ಸಹಕರಿಸಿದರು.
ಮುಡಿಪು ಶ್ರೀ ಭಾರತಿ ಶಾಲೆ 1948ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು, 2023ರಲ್ಲಿ ಅಮೃತಮಹೋತ್ಸವ ಆಚರಿಸುತ್ತಿದೆ. ಅಮೃತ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.