ಬಂಟ್ವಾಳ: ಆಳ್ವಾಸ್ ನ ಡಾ. ಎಂ.ಮೋಹನ ಆಳ್ವ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಸ್ಕೌಟ್ ಮತ್ತು ಗೈಡ್ಸ್ ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಬಂಟ್ವಾಳ ತಾಲೂಕಿನಿಂದ ಭಾನುವಾರ ಮಧ್ಯಾಹ್ನ 2.45ರಿಂದ ಹೊರೆಕಾಣಿಕೆಯ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ಬಳಿ ಇರುವ ಗೋಲ್ಡನ್ ಪಾರ್ಕ್ ಮೈದಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಬಂಟ್ವಾಳ ತಾಲೂಕು ಜನತೆಯಲ್ಲಿ ಈ ಮೂಲಕ ವಿನಂತಿಸುವುದೆಂದರೆ, ಹೊರೆಕಾಣಿಕೆಯಲ್ಲಿ ತಮ್ಮ ಸಂಘಟನೆಗಳ ಬ್ಯಾನರ್ ನೊಂದಿಗೆ ವಾಹನದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ತರಕಾರಿ ಇನ್ನಿತರವಸ್ತುಗಳನ್ನು ನೀಡಿ ಎಂದರು.
ಬಂಟ್ವಾಳ ತಾಲೂಕಿನಿಂದ 3 ಸಾವಿರದಷ್ಟು ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಸಾವಿರಾರು ಮಂದಿ ವೀಕ್ಷಣೆಗೆ ಬರಲಿದ್ದಾರೆ. ಐತಿಹಾಸಿಕ ಕ್ಷಣಗಳನ್ನು ವೀಕ್ಷಿಸಲು ಸರ್ವರನ್ನೂ ಜಾಂಬೂರಿಗೆ ಆಹ್ವಾನಿಸಲಾಗುತ್ತಿದೆ ಎಂದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಹೊರೆಕಾಣಿಕೆಯಲ್ಲಿ 1500 ಕ್ವಿಂಟಲ್ ಅಕ್ಕಿ, 1,50,000 ತೆಂಗಿನಕಾಯಿಗಳ ಸಹಿತ ವಿವಿಧ ವಸ್ತುಗಳು 350 ಪಿಕಪ್ ವಾಹನಗಳಲ್ಲಿ ಸಾಗಲಿದೆ. ಎಲ್ಲ ಜಾತಿ, ಧರ್ಮಗಳ ಸಹಕಾರದೊಂದಿಗೆ ಈ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.
ಆರ್ಥಿಕ ಸಮಿತಿ ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ, ತಾಲೂಕು ಕಾರ್ಯಾಧ್ಯಕ್ಷ ಪ್ರಹ್ಲಾದ ಶೆಟ್ಟಿ ಜಡ್ತಿಲ, ಪ್ರಧಾನ ಕಾರ್ಯದರ್ಶಿ ಬಿ.ಮಹಮ್ಮದ್ ತುಂಬೆ, ಕೋಶಾಧಿಕಾರಿ ಐತಪ್ಪ ಪೂಜಾರಿ ಮೊಡಂಕಾಪು, ಸದಸ್ಯರಾದ ಇಬ್ರಾಹಿಂ ಕೆ. ಮಾಣಿ ಮೊದಲಾದವರು ಉಪಸ್ಥಿತರಿದ್ದರು.