ಬಂಟ್ವಾಳ: ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪ್ರತಿಭಾ ಪುರಸ್ಕಾರ ಮತ್ತು ಅಮೃತ್ ಶಾಲಾ ಯೋಜನೆಯಲ್ಲಿ ನಿರ್ಮಾಣಗೊಂಡ ಹೆಣ್ಣುಮಕ್ಕಳ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವಿದ್ಯಾರ್ಥಿಗಳು ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಸವಾಲುಗಳಿಗೆ ತಯಾರಾಗಬೇಕಿದ್ದು, ಇಂಥ ಹೊತ್ತಿನಲ್ಲಿ ಶಾಲೆಗಳಿಗೆ ಮೂಲಸೌಕರ್ಯ ಹಾಗೂ ಕಲಿಕೆಗೆ ಪೂರಕವಾದ ಕೆಲಸಗಳನ್ನು ಸರಕಾರ ಮಾಡುತ್ತಿದೆ. ಶಾಸಕನಾಗಿ ಶಾಲಾಭಿವೃದ್ಧಿಗೆ ಸಕಲ ನೆರವುಗಳನ್ನು ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ನಿಟ್ಟೆ ವಿವಿ ಉಪಕುಲಪತಿ ವಿಶಾಲ್ ಹೆಗ್ಡೆ, ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ಪಾಣೆಮಂಗಳೂರು ಶಾರದಾ ಪ್ರೌಢಶಾಲೆ ಸಂಚಾಲಕ ಡಾ. ವಿಶ್ವನಾಥ ನಾಯಕ್, ಪತ್ರಕರ್ತ ಹರೀಶ ಮಾಂಬಾಡಿ, ಉದ್ಯಮಿ ಪದ್ಮನಾಭ ಮಯ್ಯ, ಲಯನ್ಸ್ ಕ್ಲಬ್ ಪ್ರಮುಖರಾದ ಸಂಜೀವ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಲತಾ, ಸವಿತಾ ಮತ್ತು ಸಂತೋಷ್, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸೀತಾ, ಮುಖ್ಯೋಪಾಧ್ಯಾಯ ಕಮಲಾಕ್ಷ ಕಲ್ಲಡ್ಕ, ಶಾಲಾ ವಿದ್ಯಾರ್ಥಿ ನಾಯಕಿ ತನಿಶಾ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಯಕ್ಷಗಾನ ಅರ್ಥಧಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಪ್ರಭಾಕರ ಜೋಷಿ, ಲಯನ್ ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಾಧ್ಯಕ್ಷರೂ ಆಗಿರುವ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಪ್ರಕಾಶ್ ವಂದಿಸಿದರು. ಶಿಕ್ಷಕ ವೃಂದದವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.