ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಹೊಕ್ಕಾಡಿಗೋಳಿಯಲ್ಲಿ ಡಿ.17ರಂದು ನಡೆಯಲಿದೆ.
ಅಂದು ಬೆಳಗ್ಗೆ ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಮಧ್ಯಾಹ್ನ 11 ಗಂಟೆಗೆ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ ಸಿಂಗ್ ಭಾಗವಹಿಸಲಿರುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ ಪೂಂಜ ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಮತ್ತಿತರ ಗಣ್ಯರು ಭಾಗವಹಿಸುವರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಪೂಜಾರಿ ಅಧ್ಯಕ್ಷತೆ ವಹಿಸಲಿರುವರು. ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾ ಕುಂಜಾಡಿ ಅವರು ಬಹುಮಾನ ವಿತರಿಸಲಿರುವರು.ಈ ಸಂದರ್ಭ ಜಗತ್ಪಾಲ್ ಶೆಟ್ಟಿ ಉಮನೊಟ್ಟು, ಅರುಣ್ ರೈ ತೋಡಾರ್, ರಾಜೀವ ಶೆಟ್ಟಿ ಎಡ್ತೂರು, ಶ್ರೀಧರ್ ಮರೋಡಿ, ಮಾಸ್ಟರ್ ಅಮೋಘವರ್ಷ ಅವರನ್ನು ಸನ್ಮಾನಿಸಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲ್‌ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.