ಬಂಟ್ವಾಳ: ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನೆ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕು ಸಾಲೆತ್ತೂರಿನ ಸೌಹಾರ್ದ ಸಭಾಭವನದಲ್ಲಿ ಮಂಗಳವಾರ ನಡೆದ ಕೊಳ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೆ ಒಟ್ಟು 2356 ಮಂದಿ ಫಲಾನುಭವಿಗಳು ಸವಲತ್ತು ಪಡೆದಿದ್ದಾರೆ ಎಂದರು.
413 ಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತುಗಳನ್ನು ಶಾಸಕರು ವಿತರಿಸಿದರು. ಕಾರ್ಯಕ್ರಮದಲ್ಲಿ ಬಂದ 99 ಅರ್ಜಿಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳ ಮೂಲಕ ವಿಲೆವಾರಿ ಮಾಡಲಾಯಿತು.
ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಕೊಳ್ನಾಡು ಗ್ರಾಪಂ ಅಧ್ಯಕ್ಷೆ ನೆಬಿಸಾ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರೋಪಾಡಿ ಗ್ರಾಪಂ ಅಧ್ಯಕ್ಷ ಅನ್ವರ್ ಕರೋಪಾಡಿ, ಕನ್ಯಾನ ಗ್ರಾಪಂ ಅಧ್ಯಕ್ಷ ಕೆ.ಪಿ.ಅಬ್ದುಲ್ ರಹಮಾನ್, ಸಾಲೆತ್ತೂರು ಗ್ರಾಪಂ ಅಧ್ಯಕ್ಷ ಹಸೈನಾರ್, ಮಂಚಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕಾಮತ್, ವಿಟ್ಲಪಡ್ನೂರು ಗ್ರಾಪಂ ಅಧ್ಯಕ್ಷೆ ರೇಷ್ಮಾಶಂಕರಿ ಬಲಿಪಗುಳಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.