ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು ಅವರಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನೃತ್ಯಧಾರಾ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.10ರಂದು ಸಂಜೆ 4 ಗಂಟೆಯಿಂದ ನಡೆಯಲಿದೆ.
ಈ ಕುರಿತು ಕೇಂದ್ರದ ಸಂಚಾಲಕ ಉದಯ ವೆಂಕಟೇಶ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹಿರಿಯ ಯಕ್ಷಗಾನ ಕಲಾವಿದ ನಯನ ಕುಮಾರ್ ನೆನಪಿಗಾಗಿ ನೀಡುತ್ತಿರುವ ಕಲಾನಯನ ಪ್ರಶಸ್ತಿಯನ್ನು ಈ ಬಾರಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರು ಅವರಿಗೆ ನೀಡಲಾಗುವುದು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಷಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ, ಮಂಗಳೂರು ವಿವಿ ಕುಲಪತಿ ಪ್ರೊ.ಎಸ್. ಸುಬ್ರಹ್ಮಣ್ಯ ಯಡಪಡಿತ್ತಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ, ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಅಧ್ಯಕ್ಷ ರತನ್ ರಮೇಶ್ ಪೂಜಾರಿ ಭಾಗವಹಿಸುವರು. ಸಭಾ ಕಲಾಪದ ನಂತರ ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದ ವಿದ್ವಾನ್ ಸುಜಯ್ ಶ್ಯಾನಭೋಗ್ ಅವರಿಂದ ರಂಗ್ ನೃತ್ಯ ಕಾರ್ಯಕ್ರಮ ಇರಲಿದೆ. ಸಂಜೆ 3.45ಕ್ಕೆ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರು ದೀಪ ಪ್ರಜ್ವಲನ ಮಾಡುವರು ಎಂದರು. ನೃತ್ಯ ನಿರ್ದೇಶಕಿ ರೋಹಿಣಿ ಉದಯ್, ಪ್ರಮುಖರಾದ ಜಯಲಕ್ಷ್ಮೀ ಪ್ರಭು, ಶ್ರದ್ಧಾ ಮತ್ತು ಮನೋಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.