ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆವರಣದ ವಿಶಾಲವಾದ ಮೈದಾನದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಡಿ.10ರಂದು ಶನಿವಾರ ಸಂಜೆ 6ರಿಂದ ನಡೆಯಲಿದೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್. ಅಶೋಕ್, ಎನ್. ಮುನಿರತ್ನ, ಶಂಕರ ಪಾಟೀಲ ಮುನೇನಕೊಪ್ಪ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಹಿತ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಡೀ ಕ್ರೀಡೋತ್ಸವವನ್ನು ವೀಕ್ಷಿಸಲಿರುವರು ಎಂದು ಅವರು ಹೇಳಿದರು.
ಕ್ರೀಡೋತ್ಸವದಲ್ಲಿ ಶಿಶುಮಂದಿರದಿಂದ 10ನೇ ತರಗತಿವರೆಗಿನ 2400 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 3559 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಆರು ಭಾಷೆಗಳ ಹಾಡುಗಳು, ಸಾಹಸ ಪ್ರದರ್ಶನ, ಪಥ ಸಂಚಲನ, ಶಿಶು ನೃತ್ಯ, ಘೋಷ್, ಜಡೆಕೋಲಾಟ, ದೀಪಾರತಿ, ನಿಯುದ್ಧ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ಕೋಲ್ಮಿಂಚು ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಭ, ಘೋಷ್ ಟಿಕ್ ಟಿಕ್ ಪ್ರದರ್ಶನ, ನೃತ್ಯವೈವಿಧ್ಯ, ಏಕಚಕ್ರ ದ್ವಿಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಚೆಂಡೆ ವಾದ್ಯ, ಕೂಪಿಕ ಸಮತೋಲನ ಸಹಿತ ವಿವಿಧ ಪ್ರದರ್ಶನಗಳು, ಸ್ವಾತಂತ್ರಯೋಧ ಸಾವರ್ಕರ್ , ಉಧಮ್ ಸಿಂಗ್ ಸಾಹಸದ ದೃಶ್ಯಗಳು ಇರಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.