ಕಾಲ್ನಡಿಗೆಯಲ್ಲಿ ಭಾರತ ಪರಿಕ್ರಮ ಯಾತ್ರೆ ಮೂಲಕ 35000 ಕಿ.ಮೀ ಸಾಗಿದ ಆರೆಸ್ಸೆಸ್ ಹಿರಿಯ ಕಾರ್ಯಕರ್ತ ಸೀತಾರಾಮ ಕೆದಿಲಾಯ ಅವರಿಗೆ ಬಿ.ಸಿ.ರೋಡಿನ ಮೊಡಂಕಾಪುವಿನ ಕಾರಂತಕೋಡಿಯ ಶಮ್ಯಾಪ್ರಾಸ ಎಂಬಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸರಿದಂತರ ಪ್ರಶಸ್ತಿಯನ್ನು ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್ ನೀಡಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ನಾಯಕ್, ಇಂದು ಭಾರತ ತನ್ನ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಂಡು ತನ್ನದೇ ಅಸ್ತಿತ್ವವನ್ನು ಸ್ಥಾಪಿಸಿ ಮುನ್ನಡೆಯಲು ಋಷಿಸಂಸ್ಕೃತಿಯೇ ಕಾರಣವಾಗಿದೆ. ಸ್ವಾಮಿ ವಿವೇಕಾನಂದರಿಂದ ತೊಡಗಿ, ಸೀತಾರಾಮ ಕೆದಿಲಾಯರವರೆಗೆ ಜಗತ್ತಿಗೆ ಭಾರತದ ಪರಂಪರೆಯನ್ನು ಸಾರುವ ಕಾರ್ಯವನ್ನು ಮಾಡುವ ಕಾರ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಗುರುವಾಗಿ ಭಾರತ ಮೂಡಿಬರುತ್ತಿದೆ ಎಂದರು.
ಈ ಸಂದರ್ಭ ಮಾತನಾಡಿದ ಸೀತಾರಾಮ ಕೆದಿಲಾಯ ಇಂದು ಇಂಡಿಯಾ ಮತ್ತೆ ಭಾರತವಾಗಿ ಸಾಗಲು ನಮ್ಮ ಕೊಡುಗೆಯೂ ಅಗತ್ಯ ಎಂದರು. ಕೃಷಿ ಸಂಸ್ಕೃತಿ ಕುರಿತು ಡಾ. ವಾರಣಾಶಿ ಅಶ್ವಿನಿ ಕೃಷ್ಣಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸೀತಾರಾಮ ಕೆದಿಲಾಯರ ಪರಿಚಯ ಮಾಡಿದರು. ಸರಿದಂತರ ಪ್ರಕಾಶನದ ಸಂಚಾಲಕ ಪ್ರೊ.ರಾಜಮಣಿ ರಾಮಕುಂಜ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಜಗದೀಶ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಜಗದೀಶ ಹೊಳ್ಳ ಮೊಡಂಕಾಪು, ಪವಿತ್ರಾ ಮಯ್ಯ ಅವರಿಂದ ದೇಶಭಕ್ತಿ ಗೀತಾ ಗಾಯನ ನಡೆದವು. ವೇದವ್ಯಾಸ ರಾಮಕುಂಜ, ಭಾರತಿ ರಾಮಕುಂಜ, ಮೇಧಾ ರಾಮಕುಂಜ, ಮತ್ತು ಧಾತ್ರಿ ರಾಮಕುಂಜ ಸಹಕರಿಸಿದರು.