ನಂತೂರು, ನ.19: ವಿದ್ಯಾಸಂಸ್ಥೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಬೇಕು. ಅದರಿಂದ ಪರಿಪೂರ್ಣ ಶಿಕ್ಷಣ ತಲುಪಲು ಸಾಧ್ಯ ಎಂದು ಬಿಎಡ್ ಕಾಲೇಜು ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೋ ಹೇಳಿದರು.
ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದ.ಕ.ಜಿಲ್ಲೆ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಉದ್ಘಾಟಿಸಿ, ಮಾತನಾಡಿದರು.
ಬಿಎಡ್ ಕಾಲೇಜು ವೃತ್ತಿ ಶಿಕ್ಷಣ ಉಪನ್ಯಾಸಕ ಕಂಟೆಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಸತತ ಭಾಗವಹಿಸುವುದು ಅಗತ್ಯ. ಆಗ ಅನುಭವ ಮತ್ತು ಜಯ ಲಭಿಸುತ್ತದೆ ಎಂದು ಹೇಳಿದರು.
ಬಿ.ಆರ್.ಸಿ. ಪ್ರಶಾಂತ್ ರಾವ್, ಕರ್ನಾಟಕ ಸಮಗ್ರ ಶಿಕ್ಷಣ ಉಪಯೋಜನೆ ಸಮನ್ವಯಾಧಿಕಾರಿ ಸುಮಂಗಳಾ ನಾಯಕ್, ಡಯಟ್ ಹಿರಿಯ ಸಮನ್ವಯಾಧಿಕಾರಿ ಶಿವಪ್ರಕಾಶ್, ಪೊಳಲಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಭಟ್, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ, ಪ್ರಾಂಶುಪಾಲರಾದ ಗಂಗಾರತ್ನಾ, ದ.ಕ.ಜಿಲ್ಲೆ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಸುಫಲಾ ಉಪಸ್ಥಿತರಿದ್ದರು.
ರಾಜ್ಯ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಸಂಘಟನ ಕಾರ್ಯದರ್ಶಿ ದೇವದಾಸ್ ಪ್ರಸ್ತಾಪಿಸಿದರು. ದ.ಕ.ಜಿಲ್ಲೆ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಿನ್ನಪ್ಪ ಕಲ್ಲಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ವಂದಿಸಿದರು. ವಿನ್ನಿ ಫಿಲೋಮಿನಾ ಮತ್ತು ವೀರಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ವಸ್ತುಪ್ರದರ್ಶನ :
ಜಿಲ್ಲೆಯ ವಿವಿಧ ಶಾಲೆಗಳ ವೃತ್ತಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳು, ಸಣ್ಣ ಮಕ್ಕಳ ಸರಕಿನ ಅಂಗಿ, ಬ್ಯಾಗ್, ಸೀರೆಯಲ್ಲಿ ರಚಿಸಿದ ಮ್ಯಾಟುಗಳು, ತೋರಣಗಳು, ಕಸದಿಂದ ರಸ, ಹೂಗಳು, ಗೂಡು ದೀಪಗಳು, ಫೀನಾಲ್, ಕ್ಲೀನಿಂಗ್ ಪೌಡರ್, ತೋಟಗಾರಿಕೆ ವಿಭಾಗದ ಹೂಗಿಡ, ತಾರಸಿ ಕೃಷಿ, ಗೊಬ್ಬರ ಮಾದರಿಗಳು ಆಕರ್ಷಕವಾಗಿದ್ದವು. ಸುತ್ತಮುತ್ತಲಿನ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ವಸ್ತುಪ್ರದರ್ಶನ ವೀಕ್ಷಿಸಿ ಆನಂದಿಸಿದರು.