ಬಂಟ್ವಾಳ ಕನ್ನಡ ಭವನದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ತಿಂಗಳ ಸಾಹಿತ್ಯ ಸಂಭ್ರಮ, ಉಪನ್ಯಾಸ, ಸನ್ಮಾನ, ಚಿಗುರು ಪ್ರತಿಭೆಗಳ ಸಹಿತ ಕವಿಗೋಷ್ಠಿ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಅಶೋಕ ಕಡೇಶಿವಾಲಯ ವಹಿಸಿದ್ದರು. ಚು.ಸಾ.ಪ. ತಾಲೂಕು ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಿಸಿದರು.
ಮುಖ್ಯ ಅತಿಥಿಯಾಗಿ ತುಂಬೆ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಿ.ಬಿ.ಅಬ್ದುಲ್ ರಹಿಮಾನ್, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ ಭಾಗವಹಿಸಿದ್ದರು.
ಮಕ್ಕಳ ಸಾಹಿತ್ಯ ಸ್ವರೂಪದ ಕುರಿತು ಶಿಕ್ಷಕ ರಮೇಶ ಉಳಯ ಉಪನ್ಯಾಸ ನೀಡಿದರು. ಹಿರಿಯ ರಂಗಕರ್ಮಿ ಮತ್ತು ರಾಜ್ಯ ತರಬೇತುದಾರ ಮಂಜು ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಬಳಿಕ ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅಧ್ಯಕ್ಷತೆಯಲ್ಲಿ ಚಿಗುರು ಪ್ರತಿಭೆಗಳ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಸಾಪ ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್, ಕವಿಗಳು ಇನ್ನೊಬ್ಬರ ಕವನಗಳಿಗೂ ಕಿವಿಯಾಗಬೇಕು ಎಂದರು.
ಸಭಾ ಕಾರ್ಯಕ್ರಮದಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು ಸ್ವಾಗತಿಸಿ, ಬಾಲಕೃಷ್ಣ ಕಾರಂತ ಎರುಂಬು ವಂದಿಸಿದರು. ಜಯರಾಮ ಪಡ್ರೆ ಮತ್ತು ಶಶಿಧರ ಏಮಾಜೆ ಕಾರ್ಯಕ್ರಮ ನಿರ್ವಹಿಸಿದರು. ಕವಿಗೋಷ್ಠಿಯ ಕಾರ್ಯಕ್ರಮವನ್ನು ಶ್ರೀಕಲಾ ಕಾರಂತ್, ರಶ್ಮಿತಾ ಸುರೇಶ್ ನಿರ್ವಹಿಸಿ, ಮಾನಸ ವಿಜಯ್ ಕೈಂತಜೆ ವಂದಿಸಿದರು.