ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಹೇಳಿಕೊಳ್ಳಲು ಗ್ರಾಮವಾಸ್ತವ್ಯ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು ಹೇಳಿದರು.
ಮಾಣಿ ಸಮೀಪ ಪೆರಾಜೆ ಗ್ರಾಮದ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಸವಲತ್ತುಗಳನ್ನು ಹೇಗೆ ಪಡೆಯಬೇಕು ಎಂಬ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ. ಕೆಲವೊಮ್ಮೆ ದಾಖಲೆಗಳ ಕೊರತೆಯಿಂದಾಗಿ ಕಚೇರಿಗಳಿಗೆ ಬಂದು ವಾಪಸ್ ಹೋಗುವ ಪರಿಸ್ಥಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಏರ್ಪಡಿಸುವ ಮೂಲಕ ಇಲಾಖೆ ಜನರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಪೂರಕ ಮಾಹಿತಿಗಳನ್ನು ನೀಡುವ ಕಾರ್ಯವನ್ನು ಮಾಡುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಉಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪಂಚಾಯತ್ ಅಭಿವೃಧ್ದಿ ಅಧಿಕಾರಿ ಸುನಿಲ್ ಕುಮಾರ್, ಉಪತಹಸೀಲ್ದಾರ್ ಗಳಾದ ನವೀನ್ ಕುಮಾರ್, ವಿಜಯ ವಿಕ್ರಮ, ಗ್ರೆಟ್ಟಾ, ನರೇಂದ್ರನಾಥ್ ಮಿತ್ತೂರು ಉಪಸ್ಥಿತರಿದ್ದರು. ಗ್ರಾಮಕರಣಿಕರಾದ ವೈಶಾಲಿ ಸ್ವಾಗತಿಸಿದರು. ಕೃತಿಕಾ ಧನ್ಯವಾದ ಸಮರ್ಪಿಸಿದರು.ಮಾಣಿ,ಪೆರಾಜೆ ಗ್ರಾಮದ ಗ್ರಾಮಕರಣಿಕರಾದ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮವಾಸ್ತವ್ಯದಲ್ಲಿ ಒಟ್ಟು 44 ಅರ್ಜಿ ಸ್ವೀಕಾರವಾಗಿದ್ದು, 16 ಅರ್ಜಿಗಳು ವಿಲೇವಾರಿ ಆಗಿರುತ್ತದೆ. ಮಧ್ಯಾಹ್ನದ ನಂತರ ಮಾನ್ಯ ತಹಶೀಲ್ದಾರ್ ರವರು ಪೆರಾಜೆ ಗ್ರಾಮದ ಮಡಲ ಪರಿಶಿಷ್ಟ ಜಾತಿ ಕಾಲೋನಿ, ಸಾದಿಕುಕ್ಕು ಮತ್ತು ಮಡಲ ಅಂಗನವಾಡಿ ಕೇಂದ್ರ ಹಾಗೂ 94ಸಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದರು.