ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ 135 ಕೋಟಿ ರೂ ವೆಚ್ಚದಲ್ಲಿ ನಡೆಯಲಿದ್ದು, ಇದರ ಶಿಲಾನ್ಯಾಸ ಕಾರ್ಯವನ್ನು ಸಣ್ಣ ನೀರಾವರಿ ಮತ್ತು ಕಾನೂನು ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಶುಕ್ರವಾರ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, 2050ನೇ ಇಸವಿಗೆ ಮಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ಕೊರತೆ ಉಂಟಾಗದಂತೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ಸೇತುವೆ ಸಹಿತ ನಿರ್ಮಿಸಲಾಗುತ್ತಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರತಿ ವರ್ಷ 500 ಕೋಟಿ ರೂಗಳನ್ನು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆಂದು ಒದಗಿಸಲಾಗುತ್ತಿದೆ ಎಂದರು.
ಶುದ್ಧೀಕರಿಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಳಕೆಗೆ ಒದಗಿಸಲಾಗಿದೆ, ಇದಲ್ಲದೆ, ವೆಂಟೆಡ್ ಡ್ಯಾಮ್ ನಿರ್ಮಾಣ ಮತ್ತು ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಕಾರ್ಲಾಂಡ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಸರಕಾರದ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದ ಮಾಧುಸ್ವಾಮಿ, ಬಯಲುಸೀಮೆಯಂಥ ಪ್ರದೇಶಗಳೂ ಸೇರಿ ರಾಜ್ಯದಾದ್ಯಂತ ನೀರಿನ ಸದ್ಬಳಕೆ ಮಾಡಿಕೊಂಡು ಪ್ರಯೋಜನ ಒದಗಿಸುವುದು ಇಲಾಖೆ ಗುರಿ ಎಂದರು.
ಕ್ಷೇತ್ರದಾದ್ಯಂತ ನೀರಿನ ಸಮಸ್ಯೆ ಪರಿಹಾರ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಕ್ಷೇತ್ರದಾದ್ಯಂತ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚೆಕ್ ಡ್ಯಾಂ, ವೆಂಟೆಡ್ ಡ್ಯಾಂ ಸಹಿತ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಹಾಗೂ ಕೃಷಿ ಮತ್ತು ಕುಡಿಯುವ ನೀರಿಗೆ ಕೊರತೆಯಾಗದಂತೆ ಮಾಡುವ ಯೋಜನೆಗಳು ಜಾರಿಯಾಗಿವೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಶುಭ ಹಾರೈಸಿದರು. ಈ ಸಂದರ್ಭ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಮುಖ್ಯ ಇಂಜಿನಿಯರ್ ರಾಘವನ್, ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ನಗರ ನೈರ್ಮಲ್ಯ ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್, ವಿಷ್ಟುಕಾಮತ್, ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ವಿನುತಾ ಪುರುಷೋತ್ತಮ, ಗುತ್ತಿಗೆದಾರರಾದ ರಾಘವೇಂದ್ರ ಕಾರಂತ ಉಪಸ್ಥಿತರಿದ್ದರು. ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿಗೂ ಇಲ್ಲಿಂದ ಕುಡಿಯುವ ನೀರೊದಗಿಸಲು ಸಾಧ್ಯ: ಸೇತುವೆ ಸಹಿತ ಕಿಂಡಿ ಅಣೆಕಟ್ಟು 315.25 ಮೀಟರ್ ಉದ್ದದ ನೇತ್ರಾವತಿ ನದಿಯ ಜಕ್ರಿಬೆಟ್ಟು ಭಾಗದಿಂದ ನರಿಕೊಂಬು ಭಾಗದವರೆಗೆ ನಿರ್ಮಾಣವಾಗಲಿದ್ದು, 21 ಪಿಲ್ಲರ್ ಗಳು ಹಾಗೂ 2 ಸ್ಲೂಯಿಸ್ ಗೇಟ್ ಗಳು ಇದಕ್ಕಿವೆ. 7.5 ಮೀಟರ್ ಅಗಲದ ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಗೇಟ್ ಇರಲಿದ್ದು, ಸಮೀಪದ ಕೃಷಿ, ಕುಡಿಯುವ ನೀರಿಗಲ್ಲದೆ, ಮಂಗಳೂರಿಗೂ ಕುಡಿಯುವ ನೀರಿನ ಕೊರತೆಯನ್ನು ತುಂಬೆ ವೆಂಟೆಡ್ ಡ್ಯಾಮ್ ಗೂ ಅನನುಕೂಲವಾದ ಸಂದರ್ಭ ಇಲ್ಲಿಂದ ಒದಗಿಸಬಹುದು. ಒಟ್ಟು 166.3 ಎಮ್.ಸಿ.ಎಫ್.ಟಿ. ನೀರು ಶೇಖರಣಾ ಸಾಮರ್ಥ್ಯವನ್ನು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಹೊಂದಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಮಾಹಿತಿ ನೀಡಿದರು.