ಬಂಟ್ವಾಳ: ಸರಕಾರಿ ಶಾಲೆ, ಉಳಿಸಿ ಬೆಳೆಸಲು ಇಂಗ್ಲೀಷ್ ಮಾಧ್ಯಮವನ್ನಾಗಿ ಪರಿವರ್ತಿಸಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನಾಗಿಸುವ ಹೊತ್ತಿನಲ್ಲೇ, ಕೇರಳಕ್ಕೆ ತಾಗಿಕೊಂಡಿರುವ ಕರ್ನಾಟಕದ ಗಡಿ ಭಾಗವಾದ ಕರೋಪಾಡಿ ಗ್ರಾಮದಲ್ಲಿ ಕೇರಳದ ಗಾಳಿ ಬೀಸುವ ಜಾಗದಲ್ಲೇ ಕನ್ನಡ ಮಾಧ್ಯಮದ ಸರಕಾರಿ ಶಾಲೆ ಉಳಿಸಲು ಹಿರಿಯ ವಿದ್ಯಾರ್ಥಿಗಳ ತಂಡವೊಂದು ಸಿದ್ಧವಾಗಿದೆ.
ಅಚ್ಚಕನ್ನಡವನ್ನು ಪಾಠ ಮಾಡುವ ಶಿಕ್ಷಕ ವೃಂದಕ್ಕೆ ಸಹಕಾರಿಯಾಗಲು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಈ ತಂಡ ಮೊದಲ ಹೆಜ್ಜೆಯಾಗಿ ಮಕ್ಕಳ ಪಾರ್ಕ್ ನಿರ್ಮಾಣ ಮಾಡಿದೆ.
ಸುಮಾರು 84 ವರ್ಷಗಳಷ್ಟು ಹಳೆಯ ಮಿತ್ತನಡ್ಕದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶಾಲೆಯನ್ನು ಮರೆಯಲಿಲ್ಲ ಎಂಬುದು ಇಲ್ಲಿ ಸಾಬೀತಾಗಿದೆ.
ಬಂಟ್ವಾಳ ತಾಲೂಕಿನ ಗಡಿಭಾಗವಾದ ಕರೋಪಾಡಿಯ ಕೆಲವೇ ಮೀಟರ್ ಮುಂದೆ ಸಾಗಿದರೆ, ಕೇರಳ ರಾಜ್ಯ ಸಿಗುತ್ತದೆ. ಅಲ್ಲಿಂದ ಪೂರ್ತಿ ಮಲೆಯಾಳದ ಹವಾ. ಜೊತೆಗೆ ಪೋಷಕರಿಗೆ ಆಂಗ್ಲ ಮಾಧ್ಯಮ ಶಿಕ್ಷಣದ ಮೇಲೆ ಸಹಜವಾದ ಪ್ರೀತಿ. ಇಂಥ ಹೊತ್ತಿನಲ್ಲಿ ಕನ್ನಡ ಶಾಲೆಗಳು ನಶಿಸಿ ಹೋಗುತ್ತಿವೆ ಎಂಬ ಆತಂಕ ಸಹಜ. ಆದರೆ ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಕಲಿತ ವಿಶ್ವದ ಬೇರೆ ಬೇರೆ ಕಡೆ ಇರುವ ಹಿರಿಯ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸೇರಿಕೊಳ್ಳುತ್ತಿದ್ದಾರೆ. ತಮ್ಮ ಶಾಲೆ ಉಳಿಸಿಕೊಳ್ಳಲು ಮಾಡಿದ ಸಮಾಲೋಚನೆಯ ಫಲವಾಗಿಯೇ ಇಂದು ಚಿಣ್ಣರ ಪಾರ್ಕ್ ನಿಂತಿದೆ.
ಮಕ್ಕಳು ಖುಷಿಯಿಂದ ಜಾರುಬಂಡಿ ಆಟವಾಡುತ್ತಾ, ಉಯ್ಯಾಲೆಯಲ್ಲಿ ವಿಹರಿಸುತ್ತಾ, ಮೆರಿಗೋರೌಂಡ್ ಸಹಿತ ಆಟಿಕೆಗಳನ್ನು ಉಪಯೋಗಿಸುವುದರ ಮೂಲಕ ಈ ಶಾಲೆಗೆ ಬಂದರೆ ಆಟದೊಂದಿಗೆ ಪಾಠ ಎಂಬ ಪರಿಕಲ್ಪನೆಯನ್ನು ಹಿರಿಯ ವಿದ್ಯಾರ್ಥಿಗಳು ಒದಗಿಸಿಕೊಟ್ಟಿದ್ದಾರೆ.
ಮಕ್ಕಳ ದಿನಾಚರಣೆಯಂದು ಇದರ ಉದ್ಘಾಟನೆ ನಡೆಯಿತು. ಹಿರಿಯ ವಿದ್ಯಾರ್ಥಿಗಳಾದ ಉಸ್ಮಾನ್ ಕರೋಪಾಡಿ, ಪಟ್ಲ ದಾಮೋದರ ಶೆಟ್ಟಿ, ಗ್ರಾಪಂ ಅಧ್ಯಕ್ಷರೂ ಆಗಿರುವ ಅನ್ವರ್ ಕರೋಪಾಡಿ, ಮುಖ್ಯ ಶಿಕ್ಷಕ ಶಿವರಾಮ ಭಟ್ ಸಹಿತ ಊರ ಗಣ್ಯರು ಉಪಸ್ಥಿತರಿದ್ದರು.