ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳ ಜನಸ್ಪಂದನಾ ಕಾರ್ಯಕ್ರಮ ಗುರುವಾರ ಸಿದ್ಧಕಟ್ಟೆಯ ಹರ್ಷಲಿ ಸಭಾಂಗಣದಲ್ಲಿ ನಡೆದಿದ್ದು, ಎಂಟು ಗ್ರಾಮಗಳಿಗೆ ಸಂಬಂಧಿಸಿದಂತೆ 432 ಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತುಗಳನ್ನು ನೀಡಲಾಯಿತು. 110 ಅರ್ಜಿಗಳು ಸ್ಥಳದಲ್ಲೇ ವಿಲೇವಾರಿ ಆದವು.
ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿ, ಅಧಿಕಾರಿಗಳು ಜನರ ಸಮಸ್ಯೆ ಆಲಿಸಲು ಕಡ್ಡಾಯವಾಗಿ ಹಾಜರಿರಬೇಕು ಹಾಗೂ ವಿಳಂಬಗತಿ ತೋರದೆ ಪರಿಹಾರ ನೀಡಬೇಕು ಎಂದರು. ಈ ಸಂದರ್ಭ ಸಂಗಬೆಟ್ಟು, ಅರಳ, ರಾಯಿ, ಕುಕ್ಕಿಪಾಡಿ, ಚೆನ್ನೈತ್ತೋಡಿ, ಇರ್ವತ್ತೂರು, ಪಿಲಾತಾಬೆಟ್ಟು, ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಜನರಿಂದ ರಸ್ತೆ, ನೀರು ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿ ಅರ್ಜಿಗಳು, ಮನವಿಗಳು ಬಂದವು.
ಜನರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ವಿಳಂಬ ಧೋರಣೆ ಮಾಡದೆ, ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಜನರ ಅಹವಾಲುಗಳನ್ನು ಸ್ವೀಕರಿಸಿದ ಸಂದರ್ಭ ಸೂಚಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಇದೇ ವೇಳೆ 94 ಸಿ ಹಕ್ಕು ಪತ್ರ, ಕಾರ್ಮಿಕರ ಕಿಟ್, ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಸಂಗಬೆಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ ವಹಿಸಿದ್ದರು. ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ , ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿದರು.
ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ಆರ್. ಪೂಜಾರಿ, ಪಂಜಿಕಲ್ಲು ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಾದ ತಾರಾನಾಥ ಸಾಲಿಯಾನ್, ಪ್ರಶಾಂತ್ ಪೈ, ಶ್ರೀಷ ಭಟ್, ಜಯಪ್ರಕಾಶ್, ಅಶೋಕ್ ಕುಮಾರ್, ಜ್ಞಾನೇಶ್, ರಾಜೇಶ್ ಬಳಿಗಾರ್, ಜೋ ಪ್ರದೀಪ ಡಿ.ಸೋಜ, ಡಾ. ಅವಿನಾಶ್, ಶೀಲಾವತಿ, ಮರ್ಲಿನ್ ಗ್ರೇಸಿ ಲೋಬೊ ಸಹಿತ ಪೊಲೀಸ್ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.