ಜಾತ್ರೆ ರೂಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಏರ್ಪಡುವುದು ಆರಂಭಗೊಂಡು ವರ್ಷಗಳೇ ಸಂದವು. ಕೇವಲ ನಾಲ್ಕು ಗೋಡೆಗಳ ಮಧ್ಯೆ ವಿದ್ವಜ್ಜನರು ಮಾಡುವ ಉಪನ್ಯಾಸಗಳು , ಚರ್ಚೆಗಳು, ಕವನ ವಾಚನ ಪಕ್ಕದಲ್ಲೇ ಆಟಿಕೆಗಳನ್ನು ಖರೀದಿಸುವ, ಕಬ್ಬಿನ ಹಾಲು ಕುಡಿಯುವ, ಪುಸ್ತಕಗಳನ್ನು ಬೆರಗಿನಿಂದ ನೋಡುವ ಜನಸಾಮಾನ್ಯನ ಕಿವಿಗೂ ಕೇಳಲಿ ಎಂಬುದು ಇದರ ಮೂಲ ಆಶಯ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನವೆಂಬುದು ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಾಡಾದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ನೃತ್ಯಗಳು ಜತೆಗೂಡಿ ಮಾತಿನೊಂದಿಗೆ ಕಲೆ, ಸಂಸ್ಕೃತಿಯ ಪ್ರದರ್ಶನಕ್ಕೂ ವೇದಿಕೆ ದೊರಕಿತು. ಕೊರೊನಾ ಈ ಗೌಜಿಯನ್ನು ಬದಿಗೆ ಸರಿಸಿತ್ತು. ಮತ್ತೆ ಜನರು ಚಪ್ಪರದಡಿಯಲ್ಲಿ ಜಾತಿ, ಮತ, ಧರ್ಮಗಳನ್ನು ಮರೆತು ಒಂದಾಗಿ ಕುಳಿತುಕೊಳ್ಳುವಂತೆ ಮಾಡಿದ ಯಶಸ್ಸು ಅಮ್ಮುಂಜೆಯಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಲ್ಲುತ್ತದೆ.
ಕಾರ್ಯಕ್ರಮಕ್ಕೆ ಆಗಮಿಸಿದ ವೀಕ್ಷಕರೊಬ್ಬರು ಹೇಳುವ ಪ್ರಕಾರ, ಪಟ್ಟಣ ಪ್ರದೇಶದಲ್ಲಾದರೆ, ವೇದಿಕೆಯಷ್ಟೇ ಸಭೆ ಭರ್ತಿಯಾಗುತ್ತಿತ್ತು. ಆದರೆ ಇಲ್ಲಿ ಹಾಗಲ್ಲ, ವೇದಿಕೆಯ ಮುಂಭಾಗವೂ ಜನಸಾಗರವೇ ಕಂಡುಬಂತು. ಸಾಮಾನ್ಯವಾಗಿ ಬೆರಳೆಣಿಕೆಯಷ್ಟು ಪ್ರೇಕ್ಷಕರನ್ನು ಕಂಡಾಗ ಸಂಘಟಕರನ್ನು ಸಮಾಧಾನಪಡಿಸಲು ಬಂದವರು ಎಷ್ಟು ಎಂಬುದು ಮುಖ್ಯವಲ್ಲ, ಎಷ್ಟು ತಲುಪಿದೆ ಎಂಬುದೂ ಮುಖ್ಯ ಎನ್ನಲಾಗುತ್ತದೆ. ಆದರೆ ಇಲ್ಲಿ ಎರಡು ದಿನಗಳಲ್ಲಿ ಬಂದ ಸುಮಾರು ಎರಡು ಸಾವಿರ ಮಂದಿಯ ಕಿವಿಗೆ ನಿಶ್ಚಿತವಾಗಿಯೂ ವಿಚಾರಗೋಷ್ಠಿಯ ಆಶಯಗಳು, ಕವಿಗೋಷ್ಠಿಯ ಪದಸಾಲುಗಳು, ಭಾಷಣದ ಸಂಗತಿಗಳು ತಲುಪಿವೆ ಎಂಬುದನ್ನು ಅಲ್ಲಗಳೆಯಲೂ ಆಗದು.
ಈ ಅರ್ಥದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಮತ್ತು ಅಮ್ಮುಂಜೆಯ ಸಮ್ಮೇಳನ ಸ್ವಾಗತ ಸಮಿತಿಯ ಒಂದು ತಿಂಗಳ ಶ್ರಮ ಸಾರ್ಥಕ್ಯವನ್ನು ಪಡೆಯಿತು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ ಸಾಲಿಯಾನ್ ಬೆಂಜನಪದವು, ಪ್ರಧಾನ ಸಂಚಾಲಕ ಅಬುಬಕರ್ ಅಮ್ಮುಂಜೆ, ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ, ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮತ್ತು ಅವರ ಜತೆಗೂಡಿದ ಎಲ್ಲ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಅನ್ಯಾನ್ಯ ಜವಾಬ್ದಾರಿಗಳನ್ನು ವಹಿಸಿಕೊಂಡವರು ಸಮ್ಮೇಳನದ ಆಶಯವಾದ ಸಾಹಿತ್ಯದಲ್ಲಿ ನಾವೀನ್ಯವನ್ನು ಸಾರ್ಥಕಗೊಳಿಸಿದರು. ಪತ್ರಿಕಾ ಬರೆಹ ಹಾಗೂ ಪತ್ರಿಕಾವೃತ್ತಿ ಸಾಹಿತ್ಯದ ಅವಿಭಾಜ್ಯ ಅಂಗ ಎನ್ನುವ ಮಾತಿಗೆ ಪೂರಕವಾಗಿ ಹಿರಿಯ ಪತ್ರಕರ್ತರೂ ಒಂದು ಕಾಲದಲ್ಲಿ ರಾಜ್ಯದಾದ್ಯಂತ ಸದ್ದು ಮಾಡಿದ ಜನವಾಹಿನಿ ಪತ್ರಿಕೆಯ ಸಂಪಾದಕರಾಗಿದ್ದ ಪ್ರೊ.ಕೆ.ಬಾಲಕೃಷ್ಣ ಗಟ್ಟಿ ಸಮ್ಮೇಳನಾಧ್ಯಕ್ಷರಾಗಿದ್ದುದು ಹಾಗೂ ಅವರ ಭಾಷಣದಲ್ಲೂ ಮುದ್ರಣ ಮಾಧ್ಯಮ ಸಾಹಿತ್ಯದ ಉಳಿವಿಗೆ ಹೇಗೆ ಪೂರಕವಾಗಿದೆ ಎಂಬುದನ್ನು ಪ್ರಸ್ತಾಪಿಸಿದ್ದು ಇಲ್ಲಿ ಉಲ್ಲೇಖನಾರ್ಹ.
ಒಂದೂವರೆ ದಿನಕ್ಕೆ ಎರಡು ಭರ್ತಿ ದಿನಗಳಿಗಾಗುವಷ್ಟು ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ, ಸಮಯಪಾಲನೆ ಆಗದೆ ಕಾರ್ಯಕ್ರಮಗಳೆಲ್ಲವೂ ವಿಳಂಬವಾಗಿಯೇ ಆಯಿತು ಎಂಬುದನ್ನು ಹೊರತುಪಡಿಸಿದರೆ, ಎಲ್ಲ ಕಾರ್ಯಕ್ರಮಗಳು ಅದ್ದೂರಿಯ ಪೆಂಡಾಲ್, ಬೆಳಕಿನ ವಿನ್ಯಾಸಗಳಿರುವ ವೇದಿಕೆಯಲ್ಲಿ ನಡೆದವು. ಅಮ್ಮುಂಜೆ ಅನುದಾನಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ಅಮ್ಮುಂಜೆಯ ಜನತೆ ಪಾಲ್ಗೊಂಡದ್ದು ಗಮನಾರ್ಹ.
ಮೆರವಣಿಗೆ – ಉದ್ಘಾಟನೆ – ಸಮಾರೋಪ
ಆರಂಭದ ಮೆರವಣಿಗೆ ಅದ್ದೂರಿತನದೊಂದಿಗೆ ದೇಸಿ ಸೊಗಡನ್ನು ಪ್ರದರ್ಶಿಸಿದರೆ, ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳು ಸಮಯಪಾಲನೆಯಲ್ಲಿ ವಿಳಂಬವಾದರೂ ಮಾತಿನ ಮಂಟಪವನ್ನು ಕಟ್ಟಿಕೊಟ್ಟವು. ಮೆರವಣಿಗೆಯಲ್ಲಿ ಆಶಯ ಭಾಷಣ ಮಾಡಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಭಾಷೆಯನ್ನು ಬೆಳೆಸುವ ಆಶಯವನ್ನು ಮಂಡಿಸಿದರೆ, ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಸಾಹಿತ್ಯ ಸಮೇಳನದಿಂದ ಕನ್ನಡ ಭಾಷೆಗೆ ಹೊಸ ಚೈತನ್ಯ ಸಿಕ್ಕಿದೆ ಎಂದರು. ಈ ಸಂದರ್ಭ ಅಮ್ಮುಂಜೆ ಇತಿಹಾಸವನ್ನು ಜನಾರ್ದನ ಅಮ್ಮುಂಜೆ ಸಂದರ್ಭೋಚಿತವಾಗಿ ಮಂಡಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಬಾಲಕೃಷ್ಣ ಗಟ್ಟಿ ಹಳೆಯ ಬಂಟ್ವಾಳದ ಚಿತ್ರಣವನ್ನು ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಕುರಿತು ಮಾತನಾಡಿದರು. ಉಡುಪಿಯ ಸಂಧ್ಯಾ ಶೆಣೈ, ಹಾಸ್ಯ ಭಾಷಣ ಮೂಲಕ ಗಮನ ಸೆಳೆದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಸುರೇಶ ನೆಗಳಗುಳಿ, ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರೆ, ಸ್ಥಳೀಯ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಮಾರಂಭಕ್ಕೆ ಮೆರುಗು ನೀಡಿದರು.
ಸಮ್ಮೇಳನದಲ್ಲಿ ಟೀಕೆಗಳು ಸಹಜ ಆದರೆ ಸಂಘಟಿಸುವುದು ಕಷ್ಟ ಎಂದು ಸಮಾರೋಪ ಭಾಷಣ ಮಾಡಿದ ಮಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಆರ್. ನರಸಿಂಹಮೂರ್ತಿ ಹೇಳಿದರೆ, ಡಾ. ಎಂ.ಪಿ.ಶ್ರೀನಾಥ್ ಹಾಗೂ ಪ್ರೊ. ಬಾಲಕೃಷ್ಣ ಗಟ್ಟಿ ಮನದಾಳದ ಮಾತುಗಳನ್ನಾಡಿದರು. ಕನ್ನಡದ ಉಳಿವಿನ ಕುರಿತು ವಕೀಲ ಅಶ್ವನಿ ಕುಮಾರ್ ರೈ ಮಾತನಾಡಿದರೆ, ಬಳಿಕ ಇಡೀ ಸಮಾರೋಪ ಸಮಾರಂಭ ಆತ್ಮೀಯ ಬೀಳ್ಕೊಡುಗೆ ಕ್ಷಣವಾಗಿ ಬದಲಾಯಿತು.
ಗೋಷ್ಠಿಗಳು: ಹಿರಿಯ ಪತ್ರಕರ್ತ, ಕವಿ ಗಣೇಶ ಪ್ರಸಾದ ಪಾಂಡೇಲು ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಮೂಡಿಬಂದ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳು, ಬ್ಯಾರಿ, ಕೊಂಕಣಿ, ಕನ್ನಡ, ಹವ್ಯಕ ಭಾಷೆಯಲ್ಲಿ ಕವಿಗಳು ಉತ್ಸಾಹದಿಂದ ಪಾಲ್ಗೊಂಡು ಕವನ ಪ್ರಸ್ತುತಪಡಿಸಿದರು. ಭಾನುವಾರದ ಕವಿಗೋಷ್ಠಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಹದಿನಾಲ್ಕು ಕವಿಗಳು ಕವನವಾಚನ ಮಾಡಿದರು. ಎಂಡೋಸಲ್ಫಾನ್, ಪ್ರಚಲಿತ ಸಮಸ್ಯೆಗಳ ಕುರಿತು ತಮ್ಮ ಕವನಗಳ ಮೂಲಕ ಹೇಳುವ ವೇಳೆ ಕವಿಗಳೊಂದಿಗೆ ಕೆಲ ಸಭಿಕರೂ ಭಾವುಕರಾದದ್ದು ಕಂಡುಬಂತು.
ಸಮಾಜ ಸಾಹಿತ್ಯ ಶಿಕ್ಷಣ ಕುರಿತು ಶ್ರೀಧರ ಅಳಿಕೆ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಕೆ.ಎನ್.ಗಂಗಾಧರ ಆಳ್ವ, ಸುಜಾತಾ ಕುಮಾರಿ, ಅನಸೂಯಾ ಈಶ್ವರ ಚಂದ್ರ ವಿಚಾರ ಮಂಡಿಸಿದರೆ, ರಂಗಭೂಮಿ – ಪ್ರಾದೇಶಿಕ ದೃಷ್ಟಿಕೋನ, ಅಂದು ಇಂದು ಎಂಬ ವಿಷಯದಲ್ಲಿ ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ಸಮನ್ವಯಕಾರರಾಗಿ, ಹಿರಿಯ ರಂಗಕರ್ಮಿಗಳಾದ ಮಂಜು ವಿಟ್ಲ, ಮೌನೇಶ ವಿಶ್ವಕರ್ಮ ಮತ್ತು ಗೋಪಾಲ ಅಂಚನ್ ವಿಷಯ ಪ್ರಸ್ತುತಪಡಿಸಿದರು. ಸಮಕಾಲೀನ ತುಳು ಮತ್ತು ಕನ್ನಡ ಭಾಷೆಯ ರಂಗಭೂಮಿಯ ಸ್ಥಿತಿಗತಿ ಹಾಗೂ ಸ್ಟಾಂಡಪ್ ಕಾಮಿಡಿಗಳಾಗುತ್ತಿರುವ ಪಾತ್ರಗಳು, ಪ್ರತಿಭಾ ಕಾರಂಜಿಯಲ್ಲಿ ನಾಟಕ ಮರೆಯಾಗುತ್ತಿರುವುದು, ಹವ್ಯಾಸಿಗಳ ಸಮಸ್ಯೆಗಳ ಕುರಿತು ರಂಗಕರ್ಮಿಗಳು ತಮ್ಮ ವಿಚಾರ ಮಂಡಿಸಿದರು.
ಸಾಹಿತಿ, ಪತ್ರಕರ್ತ ಎ.ಕೆ.ಕುಕ್ಕಿಲ ಅವರು ಸಮನ್ವಯಕಾರರಾಗಿದ್ದ ಯುವಸಂವಾದ ಗೋಷ್ಠಿಯಲ್ಲಿ ಸಾಹಿತ್ಯ ಯುವಪೀಳಿಗೆಯನ್ನಷ್ಟೇ ಅಲ್ಲ, ಮಕ್ಕಳನ್ನು ಹೇಗೆ ತಲುಪುತ್ತಿದೆ ಎಂಬ ಕುರಿತು ಚರ್ಚೆಗಳು ನಡೆದವು. ಯುವ ಸಾಹಿತಿ ರಾಜಾರಾಮ ವರ್ಮ, ಬೃಜೇಶ್ ಅಂಚನ್ ಮತ್ತು ಕಾನೂನು ವ್ಯಾಸಂಗ ವಿದ್ಯಾರ್ಥಿ ಹರ್ಷಿತ್ ಕೊಯ್ಲ ವಾಸ್ತವ ವಿಚಾರಗಳ ಬಗ್ಗೆ ಮಾತನಾಡಿ, ಸಮ್ಮೇಳನದ ಆಶಯವನ್ನು ಸಾರ್ಥಕಗೊಳಿಸಿದರು. ಇದೇ ಹೊತ್ತಿನಲ್ಲಿ ಗಣ್ಯರಾದ ಮಾಜಿ ಸಚಿವ ಬಿ.ರಮಾನಾಥ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ, ಭಾಗವತ ಪಟ್ಲ ಸತೀಶ ಶೆಟ್ಟಿ ಆಗಮಿಸಿ ಶುಭ ಹಾರೈಸಿ, ಸಮ್ಮೇಳನ ಜನರನ್ನು ತಲುಪಿದ ಬಗ್ಗೆ ಮೆಚ್ಚುಗೆಯಾಡಿದರು.
ಸಾಹಿತ್ಯದೊಂದಿಗೆ: ಸಮ್ಮೇಳನದಲ್ಲಿ ಗೋಷ್ಠಿಗಳೊಂದಿಗೆ ಯಕ್ಷಗಾನ ತಾಳಮದ್ದಳೆ, ರಸಮಂಜರಿ ಕಾರ್ಯಕ್ರಮ, ಸ್ಥಳೀಯ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, ದಫ್ ಕಾರ್ಯಕ್ರಮಗಳೂ ಮೂಡಿಬಂದು ರಂಜನೆಗೂ ಅವಕಾಶ ನೀಡಿದವು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಕಾರ್ಯಕ್ರಮಗಳು, ಸ್ಥಳೀಯ ಕೃಷಿಕರಿಗೆ, ಸಂಘ ಸಂಸ್ಥೆಗಳಿಗೆ ಪುರಸ್ಕಾರ ಕಾರ್ಯಕ್ರಮಗಳೂ ನಡೆದವು. ಸ್ಥಳೀಯ ಗ್ರಾಮ ಪಂಚಾಯಿತಿ, ಸ್ಥಳೀಯ ಶಾಲಾ ಮಕ್ಕಳು, ಕಾಲೇಜು ಮಕ್ಕಳು, ಸಾರ್ವಜನಿಕರು ಸಂಪೂರ್ಣವಾಗಿ ತೊಡಗಿಸಿಕೊಂಡು ಜಾತ್ರೆಯೋಪಾದಿಯಲ್ಲಿ ಸಮ್ಮೇಳನ ಸಂಪನ್ನಗೊಂಡಿತು. ಸ್ಥಳೀಯರಿಗಷ್ಟೇ ಅಲ್ಲ, ದೂರದೂರದಿಂದ ಬಂದವರಿಗೆ ಕವಿಗೋಷ್ಠಿಯ ಭಾವಪೂರ್ಣ ಕವನಗಳು, ವೈವಿಧ್ಯಮಯ ಪ್ರದರ್ಶನಗಳ ಜೊತೆಗೆ ಗೋಲಿಸೋಡಾ ನೆನಪಾಗದಿರದು.
ಬಂಟ್ವಾಳದ ಬೇರೆ ಬೇರೆ ಭಾಗಗಳಿಂದ ಕವಿಗೋಷ್ಠಿ ಸಹಿತ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಆಗಮಿಸುವವರು ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಲು, (ತಮ್ಮಿಚ್ಛೆಯ ಕಾರ್ಯಕ್ರಮಗಳನ್ನು ನೋಡಲು) ಆಹ್ವಾನಪತ್ರಿಕೆಯಲ್ಲಿದ್ದ ಸಮಯವನ್ನು ನೋಡಿಕೊಂಡು ಹೋದವರು ಕಾಯಬೇಕಾಗಿ ಬಂದದ್ದು ಸಮಯಪಾಲನೆಯ ಕೊರತೆಯಿಂದಾಗಿ. ಮೊದಲ ದಿನ ಬಹುಭಾಷಾ ಕವಿಗೋಷ್ಠಿ ಉದ್ಘಾಟನಾ ಸಮಾರಂಭ ವಿಳಂಬವಾದ ಕಾರನ, ಸುಮಾರು ಎರಡು ಗಂಟೆ ತಡವಾಗಿ ಆರಂಭಗೊಂಡು, ಹತ್ತು ಗಂಟೆಯ ಹೊತ್ತಿಗೆ ಮುಗಿದರೆ, ಮರುದಿನ ಮೊದಲ ವಿಚಾರಗೋಷ್ಠಿ ಸುದೀರ್ಘವಾಗಿ ನಡೆದ ಕಾರಣ, ಮತ್ತೆಲ್ಲವೂ ವಿಳಂಬವಾಗುತ್ತಾ ಸಾಗಿತು. ಹೀಗಾಗಿ ಸಮಾರೋಪವೂ ತಡವಾಯಿತು. ಸಮಯಪರಿಪಾಲನೆ ಆಗದೇ ಇರುವುದನ್ನು ಹೊರತುಪಡಿಸಿದರೆ, ಕಾರ್ಯಕ್ರಮಗಳೆಲ್ಲವೂ ನಡೆದು, ಜಾತ್ರೆಯೋಪಾದಿಯಲ್ಲಿ ಸಮ್ಮೇಳನ ತನ್ನ ಮೂಲ ಆಶಯವಾದ ನಾವೀನ್ಯವನ್ನು ಜನರಿಗೆ ನೀಡುವ ಕೆಲಸ ಮಾಡಿತು.