ಬಂಟ್ವಾಳ: ಕಳೆದೆರಡು ದಶಕಗಳಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಮುದ್ರಣ ಮಾದ್ಯಮ ಒಂದು ದೊಡ್ಡ ಸವಾಲನ್ನು ಎದುರಿಸುತ್ತಿವೆ. ಆದರೆ ಮುದ್ರಣ ಮಾಧ್ಯಮ ತನ್ನ ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ತನ್ನ ಓದುಗರನ್ನು ಗಟ್ಟಿಯಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ಮುದ್ರಣ ಮಾಧ್ಯಮ ತನ್ನ ಓದುಗರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಇಡಿ ಸಾಹಿತ್ಯ ಲೋಕವನ್ನೇ ರಕ್ಷಿಸಿದೆ ಎಂದು ಹಿರಿಯ ಪತ್ರಕರ್ತ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.
ಅಮ್ಮುಂಜೆಯಲ್ಲಿ ಶನಿವಾರ ಆರಂಭಗೊಂಡ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೋದ್ಯಮ ಸಾಹಿತ್ಯದ ಒಂದು ಪ್ರಮುಖ ಆಯಾಮ. ಸಾಹಿತ್ಯ ಮತ್ತು ಮುದ್ರಣ ಮಾಧ್ಯಮ ಒಂದಕ್ಕೊಂದು ಪೂರಕ ಒಂದು ಇನ್ನೊಂದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಯಾಹಿಸುತ್ತದೆ. ಒಂದು ಇನ್ನೊಂದರ ಸ್ಪೂರ್ತಿಯಾಗಿರುತ್ತದೆ ಎಂದರು.
ಕನ್ನಡಕ್ಕೆ ಪ್ರಾಶಸ್ತ್ಯ:
ಮಾತೃಭಾಷೆ ತುಳು, ಕೊಂಕಣಿ ಆಗಿದ್ದರೂ ಕನ್ನಡ ನಮ್ಮ ನಾಡು ನುಡಿ ಅದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡಲೇಬೇಕು ಎಂದು ಈ ಸಂದರ್ಭ ಪ್ರೊ.ಗಟ್ಟಿ ಹೇಳಿದರು.
ಬಡಕಬೈಲಿನಿಂದ ನಡೆದ ಅದ್ದೂರಿ ಮೆರವಣಿಗೆ ಬಳಿಕ
ಸಮ್ಮೇಳನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡಕ್ಕೆ ಸಮ್ಮೇಳನದಿಂದ ಹೊಸ ಚೈತನ್ಯ ದೊರಕಲಿ ಎಂದ ಅವರು ಕಾರ್ಯಕ್ರಮ ಸಂಘಟನೆ ಅಚ್ಚುಕಟ್ಟುತನ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯ ಎಂದು ಹೇಳಿದರು.
ಭಾಷಣಕಾರ್ತಿ ಸಂಧ್ಯಾ ಶೆಣೈ ಮಾತನಾಡಿ ಹೊಸ ಸಾಹಿತಿಗಳ ಉತ್ಪಾದನೆಯಾಗಲು ನಾವು ಮನೆಯಲ್ಲಿ ಕನ್ನಡ ಮಾತನಾಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಶುಭ ಹಾರೈಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್, ಪ್ರಧಾನ ಸಂಚಾಲಕ ಅಬುಬಕ್ಕರ್ ಅಮ್ಮುಂಜೆ, ಪ್ರಮುಖರಾದ ಜೀವರಾಜ ಶೆಟ್ಟಿ, ಡಾ.ಎ.ಮಂಜಯ್ಯ ಶೆಟ್ಟಿ, ದೇವದಾಸ ಹೆಗ್ಡೆ, ದೇವಪ್ಪ ಪೂಜಾರಿ, ಅಮ್ಮುಂಜೆ ವಾಮನ ಆಚಾರ್ಯ, ಚಂದ್ರಹಾಸ ಪಲ್ಲಿಪ್ಪಾಡಿ, ಪಿಡಿಒಗಳಾದ ನಯನಾ, ಮಲ್ಲಿಕಾ, ಕಸಾಪ ಗೌ.ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಕಪ್ಪ ಶೆಟ್ಟಿ ಸ್ವಾಗತಿಸಿದರು.