ಬಂಟ್ವಾಳ: ಕಟ್ಟಡ ಕಾರ್ಮಿಕರ ಹೆಸರಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಲವರು ಬೋಗಸ್ ಸದಸ್ಯತ್ವ ಮಾಡುತ್ತಿದ್ದು, ದಾರಿಯಲ್ಲಿ ಹೋಗುವವರೆಲ್ಲರೂ ಕಟ್ಟಡ ಕಾರ್ಮಿಕರ ನೆಪದಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ, ನಿಜವಾದ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲವಾಗಿದೆ ಎಂದು ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ. ಆರೋಪಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ರಾಜ್ಯದಲ್ಲಿ ಜೀವನ ನಡೆಸುವುದು ದುಸ್ತರವಾಗಿದ್ದು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ, ಅವೈಜ್ಞಾನಿಕ ಕೂಲಿಯನ್ನು ನೀಡಲಾಗುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ, ಕನಿಷ್ಠ ವೇತನ, ಕನಿಷ್ಠ ಪಿಂಚಣಿಯ ಮೊತ್ತ ಏರಿಸುವುದೇ ಮೊದಲಾದ ವಿಚಾರಗಳನ್ನು ಮುಂದಿಟ್ಟು ಜನವರಿಯಲ್ಲಿ ಎಐಟಿಯುಸಿ ಸಹಿತ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ರೈತ ಸಮುದಾಯದ ಬಿಟ್ಟರೆ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ವರ್ಗ ಇದ್ದರೆ ಕೆಎಸ್ಆರ್ಟಿಸಿನೌಕರರು ಅವರ ಸಮಸ್ಯೆಗಳನ್ನು ಆಲಿಸಿ ಪರಿಸ್ಥಿತಿ ಯನ್ನು ಸುಧಾರಣೆ ಮಾಡಬೇಕು ಎಂದರು. ಎಐಟಿಯುಸಿ ಉಡುಪಿ, ದ.ಕ.ಜಿಲ್ಲಾಧ್ಯಕ್ಷ ಎಚ್.ವಿ.ರಾವ್, ಕಾರ್ಯದರ್ಶಿ ಬಿ.ಶೇಖರ್, ಪ್ರಮುಖರಾದ ಸುರೇಶ್ ಕುಮಾರ್ ಬಂಟ್ವಾಳ, ಸೀತಾರಾಮ ಬೇರಿಂಜ, ಪ್ರವೀಣ್ ಕುಮಾರ್, ಕರುಣಾಕರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.